ಚಿತ್ರದುರ್ಗ: ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಎಂಎಲ್ಸಿ ಚುನಾವಣೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ಎಂದು ಎಂಎಲ್ಸಿ ಪುಟ್ಟಣ್ಣಯ್ಯ ಮನವಿ ಮಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನ ಆಯೋಗ ಜಾರಿಗೆ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಒಪಿಎಸ್ ಜಾರಿಯಾಯಿತು. ಆದರೆ, ಕಾಂಗ್ರೆಸ್ ಎನ್‌ಪಿಎಸ್ ಪರವಿದೆ. ಆದ್ದರಿಂದ ಈ ಬಾರಿ ಬಹು ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದರು.
ಶಿಕ್ಷಕರ ಬಡ್ತಿ, ವೇತನ ಸಮಸ್ಯೆಗೆ ಪರಿಹಾರ, ಖಾಲಿ ಹುದ್ದೆಗಳ ಭರ್ತಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ, ಶಿಕ್ಷಕರ ಕುಟುಂಬಕ್ಕೆ 25ಲಕ್ಷ ರೂ. ಆರೋಗ್ಯ ವಿಮೆ ಕೊಡಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿವೆ. ಆ ನಿಟ್ಟಿನಲ್ಲಿ ಕೆಲಸ ಮಾಡಲು ಕೈ ಅಭ್ಯರ್ಥಿ ಬೆಂಬಲಿಸಿ ಎಂದು ಕೋರಿದರು.
ಅನುದಾನ ರಹಿತ ಖಾಸಗಿ ಸಂಸ್ಥೆಗಳ ಶಿಕ್ಷಕರು ಈ ಹಿಂದೆ 140 ದಿನ ಹೋರಾಟ ನಡೆಸಿದರು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅವರ ಸಮಸ್ಯೆಗೆ ಸ್ಪಂದಿಸಲಿಲ್ಲ. ಅಂದಿನ ಸಿಎಂ ಮಾತನಾಡಲಿಲ್ಲ. ಮೂರು ಜನ ಆತ್ಮಹತ್ಯೆ ಮಾಡಿಕೊಂಡರು. ಇನ್ನೂ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದು ಉತ್ತಮ ಬೆಳವಣಿಗೆಯಲ್ಲ. ಅಂದೇ ಕೈ ಮುಗಿದು ನೈತಿಕತೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಯಾವುದೇ ಸರ್ಕಾರವಿರಲಿ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸ್ಥಾನಗಳ ಸಂಖ್ಯೆ ಕಡಿಮೆ ಇದ್ದು, ಶಿಕ್ಷಕರ ಪರವಿರುವ ಸಿಎಂ ಹಾಗೂ ಡಿಸಿಎಂ ಕೈ ಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಿ ಎಂದು ವಿನಂತಿಸಿದರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಕೆ.ಎಂ.ಹಾಲಸ್ವಾಮಿ, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಡಿ.ಟಿ.ವೆಂಕಟೇಶ್, ಮುದಸಿರ್ ನವಾಜ್, ಯು.ಲಕ್ಷ್ಮ್ಮಿಕಾಂತ್, ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು ಇತರರಿದ್ದರು.