ಬೀದರ್: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ಜರುಗಿದ್ದು, ಜಿಲ್ಲೆಯಲ್ಲಿ ಶೇ.74.40 ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ 3433 ಪುರುಷರು, 493 ಮಹಿಳೆಯರು ಸೇರಿದಂತೆ ಒಟ್ಟು 4926 ಮತದಾರರಿದ್ದರು. ಈ ಪೈಕಿ 3665 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2736 ಪುರುಷ ಹಾಗೂ 929 ಮಹಿಳಾ ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ 34 ಮತಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು.
ಜಿಲ್ಲಾಧಿಕಾರಿ ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ವಿವಿಧೆಡೆ ಸುತ್ತಾಡಿ ಪರಿಶೀಲನೆ ನಡೆಸಿದರು.
ಕರೊನಾ ಹಿನ್ನೆಲೆಯಲ್ಲಿ ಎಲ್ಲ ಮತ ಕೇಂದ್ರಗಳಲ್ಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತದಾನಕ್ಕೆ ಬಂದವರಿಗೆ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಬೆಳಗ್ಗೆ 10ರವರೆಗೆ ಮತದಾನ ಮಂದಗತಿಯಿಂದ ನಡೆಯಿತು. ಆದರೆ ನಂತರ ಬಿರುಸಿನಿಂದ ಸಾಗಿತು. 11ರ ಬಳಿಕ ವಿವಿಧ ಮತಗಟ್ಟೆಗಳಲ್ಲಿ ಶಿಕ್ಷಕ ಮತದಾರರ ಸಾಲುಗಳು ಕಂಡುಬಂದವು. ಹೀಗಾಗಿ ಮಧ್ಯಾಹ್ನ 2ರ ಹೊತ್ತಿಗೆ ಶೇ.54ರಷ್ಟು ಮತದಾನ ನಡೆಯಿತು.
ಎಲ್ಲ ಮತ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಸ್ಪಿ ನಾಗೇಶ, ಹೆಚ್ಚುವರಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಬಸವೇಶ್ವರ ಹೀರಾ ವಿವಿಧೆಡೆ ಸಂಚರಿಸಿ ಸ್ಥಿತಿಗತಿ ಅವಲೋಕಿಸಿದರು. ಅಲ್ಲಲ್ಲಿ ಮೊಬೈಲ್ ಟೀಮ್ ಗಳು ಸುತ್ತಾಡಿದವು. ಮತದಾನ ಪ್ರಕ್ರಿಯೆ ಮುಗಿದ ನಂತರ ಎಲ್ಲ ಮತಪೆಟ್ಟಿಗೆಗಳನ್ನು ಬಿಗಿ ಭದ್ರತೆಯೊಂದಿಗೆ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರ ನೇತೃತ್ವದ ಅಧಿಕಾರಿಗಳ ತಂಡ ಇಲ್ಲಿಂದ ಕಲಬುರಗಿಗೆ ತೆರಳಿ ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಡಾ. ಪ್ರಸಾದ್ ಅವರಿಗೆ ಒಪ್ಪಿಸಿತು. ನ. 2ರಂದು ಕಲಬುರಗಿಯಲ್ಲೇ ಮತ ಎಣಿಕೆ ನಡೆಯಲಿದೆ.