ಜಿಲ್ಲೆ

ಎಂಇಎಸ್ ಹದ್ದು ಬಸ್ತಿನಲ್ಲಿಡಲು ಕ್ರಮ, ಸಿಎಂ ಬೊಮ್ಮಾಯಿ ಎಚ್ಚರಿಕೆ

ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಇದೇ ಮೊದಲಲ್ಲ. ಕಳೆದ 50 ವರ್ಷಗಳಿಂದ ಇಂತಹ ಕೆಲಸವನ್ನು ಅವರು ಮಾಡುತ್ತಲೇ ಬಂದಿದ್ದಾರೆ. ಅವರನ್ನು ಹೇಗೆ ಹದ್ದು ಬಸ್ತಿನಲ್ಲಿ ಇಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾ ಮೇಳ ನಡೆಸುತ್ತಿರುವ ಎಂಇಎಸ್ ಮುಖಂಡರಿಗೆ ಈ ಮೂಲಕ ಕಡಕ್ ಎಚ್ಚರಿಕೆ ಕೊಟ್ಟರು.

ಡಿ.ಕೆ. ಶಿವಕುಮಾರ ಅವರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರದಲ್ಲಿ ಅದೊಂದು ಆಕಸ್ಮಿಕ ಘಟನೆ ಎಂದಿದ್ದಾರೆ. ಇದನ್ನು ಬಿಜೆಪಿ ಹೇಗೆ ರಾಜಕೀಯವಾಗಿ ಬಳಸಿಕೊಳ್ಳುತ್ತದೆ? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ಈ ರೀತಿ ಹೇಳುವುದು ಸರಿಯಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿ ಅವರು ಪ್ರತಿಕ್ರಿಯೆ ನೀಡಬೇಕು ಎಂದು ತಿರುಗೇಟು ನೀಡಿದರು.

ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ತರುತ್ತಿದ್ದೇವೆ. ಎಸ್ಸಿಎಸ್ಟಿ ಮೀಸಲಾತಿ ಜಾರಿ ಬಿಲ್ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿದ್ದು, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ ಎಂದು ಸಿಎಂ ಹೇಳಿದರು.