ಚಾಮರಾಜನಗರ: ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಎಂಇಎಸ್ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಮಹರಾಷ್ಟ್ರದ ಎಂಇಎಸ್ ಸಂಘಟನೆ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಆರ್.ಮೋಹನ್ ಮಾತನಾಡಿ, ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕು. ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎಂ.ಇ.ಎಸ್ ಪುಂಡರನ್ನು ಬಂಧಿಸಬೇಕು. ಸುಳ್ಳು ಮೊಕದ್ದಮೆಯನ್ನು ದಾಖಲು ಮಾಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಕನ್ನಡಿಗರಿಗೆ ಅವಮಾನವಾಗುತ್ತಿದ್ದರೂ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಗರ ಪರವಾಗಿ ನಿಂತಿರುವುದು ಅತ್ಯಂತ ಖಂಡನೀಯ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಮಹಾರಾಷ್ಟ್ರದ ಎಂಇಎಸ್ ಪುಂಡರು ಕನ್ನಡದಲ್ಲೇ ಇದ್ದು, ಬದುಕು ಕಟ್ಟಿಕೊಂಡು ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿರುವುದು ಅತ್ಯಂತ ಖಂಡನೀಯ. ಈಗಾಗಲೇ ಕರವೇ ವತಿಯಿಂದ ಬೆಳಗಾವಿಗೆ ಮುತ್ತಿಗೆ ಹಾಕಲಾಗುತ್ತಿದ್ದು, ಎಂಇಎಸ್ ಗೂಂಡಾಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಕರವೇ ಉಪಾಧ್ಯಕ್ಷ ಬಾಬು ರಾಮಸಮುದ್ರ, ಅವಿನಾಶ್, ಗೌರವಾಧ್ಯಕ್ಷ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಅರ್ಜುನ್, ಕಾರ್ಮಿಕ ಘಟಕ ಅಧ್ಯಕ್ಷ ಹರೀಶ್ ನಾಯಕ್, ನಮ್ಮನೆ ಪ್ರಶಾಂತ್, ಕೊಳ್ಳೇಗಾಲ ತಾಲೂಕಿನ ಅಧ್ಯಕ್ಷ ಜಗದೀಶ್ , ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಮ್ಮ, ಪ್ರಧಾನ ಕಾರ್ಯದರ್ಶಿ ಶಿವಮ್ಮ, ರೇಖಾ ಹಾಗೂ ಇತರರು ಭಾಗವಹಿಸಿದ್ದರು.