ಬಾಗೇಪಲ್ಲಿ : ತಾಲೂಕಿನಲ್ಲಿ ಕೆಲ ವೈನ್‌ಶಾಪ್‌ಗಳಲ್ಲಿ ಮಧ್ಯಾಹ್ನಕ್ಕೆ ದಾಸ್ತಾನು ಖಾಲಿಯಾದರೆ, ಇನ್ನೂ ಕೆಲವೆಡೆ ಸನ್ನದುದಾರರು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ತಾಲೂಕಿನ ಪಾತಪಾಳ್ಯ ಹೋಬಳಿ ಕೇಂದ್ರದಲ್ಲಿ 1 , ಮಿಟ್ಟೇಮರಿ ಹೋಬಳಿ ಕೇಂದ್ರದಲ್ಲಿ ಎಂಎಸ್‌ಐಎಲ್ ಸೇರಿ 2 , ಬಾಗೇಪಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್ ಸೇರಿ 3, ಚೇಳೂರು 1, ಬಿಳ್ಳೂರು 1 ಸೇರಿ ಮೂರು ಎಂಎಸ್‌ಐಎಲ್ ಮತ್ತು ಆರು ಖಾಸಗಿ ಮಾಲೀಕತ್ವದ ಮದ್ಯದಂಗಡಿ ಸೇರಿ ಒಟ್ಟು 9 ಮದ್ಯ ಅಂಗಡಿಗಳಿಗೆ ರಾಜ್ಯ ಅಬಕಾರಿ ಇಲಾಖೆ ಮಾರಾಟಕ್ಕೆ ಅನುಮತಿ ನೀಡಿದೆ.
ಬೆಳಗ್ಗೆ 9 ಗಂಟೆಗೆ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರು, ಆದರೆ ಎಣ್ಣೆಪ್ರಿಯರು ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತ್ತಿದ್ದರು. ಕೆಲ ಬಾರ್‌ಗಳ ಮುಂದೆ 1 ಕಿಮಿ ದೂರದಷ್ಟು ಕ್ಯೂ ಇದ್ದದ್ದು ಕಂಡು ಬಂತು. ಬೇಡಿಕೆ ಗಮನಿಸಿದ ಮಾಲೀಕರು ಎಂಆರ್‌ಪಿ ಬೆಲೆಗಿಂತ ಶೇ 10 ರಷ್ಟು ಹೆಚ್ಚುವರಿ ಹಣ ವಸೂಲಿ ಮಾಡಿದರು.
ಸಿಕ್ಕಿದ್ದರಲ್ಲೇ ಮತ್ತಿನ ಗಮ್ಮತ್ತು : ಲಾಕ್‌ಡೌನ್ ಸಮಯದಲ್ಲಿ ಹಿಂಬದಿ ಬಾಗಿಲಿನಿಂದ ಮಾರಾಟಕ್ಕೆ ಮುಂದಾಗಿದ್ದ ಬಾರ್‌ಗಳಲ್ಲಿ ಮಧ್ಯಾಹ್ನವೇ ಹಲವು ಬ್ರಾಂಡ್‌ನ ಮದ್ಯ ಖಾಲಿ ಆಗಿದೆ. ಇದರಿಂದ ನಿರಾಸೆಗೊಂಡ ಎಣ್ಣೆಪ್ರಿಯರು ಬೇರೆ ಬಾರ್ ಬಳಿ ಹೋಗಿ ಮತ್ತೊಮ್ಮೆ ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಸಾಧ್ಯವಾಗದೆ ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುತ್ತ ಸಿಕ್ಕಿದ್ದನ್ನೇ ಖರೀದಿಸಿ ತೃಪ್ತಿ ಪಟ್ಟುಕೊಂಡರು.
ಎಂಎಸ್‌ಐಲ್‌ನಲ್ಲಿ ಮದ್ಯ ಮಾಯ: ತಾಲೂಕಿನ ಯಲ್ಲಂಪಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗೆ ಅಬಕಾರಿ ಇಲಾಖೆ ಬೀಗ ಮುದ್ರೆ ಹಾಕಿದಾಗ ಇದ್ದ ದಾಸ್ತಾನಿಗೂ, ಈಗ ಮಳಿಗೆಯಲ್ಲಿದ್ದ ದಾಸ್ತಾನಿಗೂ ಬಾರಿ ವ್ಯತ್ಯಾಸ ಕಂಡು ಬಂದಿದೆ, ಕಾಳಸಂತೆಯ ಅನುಮಾನದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಸ್ತಾನು ಪರಿಶೀಲಿಸಿ ಸೀಜ್ ಮಾಡಿ ಬೀಗ ಜಡಿದಿದ್ದಾರೆ.