ಲಕ್ಷ್ಮೇಶ್ವರ: ಪರವಾನಗಿ ಇಲ್ಲದೆ ಎಂ ಸ್ಯಾಂಡ್, ಖಡಿ ಸಾಗಿಸುತ್ತಿದ್ದ 3 ಟಿಪ್ಪರ್ಗಳನ್ನು ಸೋಮವಾರ ಪಟ್ಟಣದಲ್ಲಿ ತಹಸೀಲ್ದಾರರು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಸಂಚರಿಸುತ್ತಿದ್ದ 3 ಟಿಪ್ಪರ್ಗಳನ್ನು ಪರಿಶೀಲಿಸಿದಾಗ ಯಾವುದೇ ಪಾಸ್ ಇರಲಿಲ್ಲ. ಟಿಪ್ಪರ್ಗಳನ್ನು ಪೊಲೀಸ್ ವಶಕ್ಕೆ ನೀಡಿ ಕ್ರಮಕ್ಕೆ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತಾಲೂಕಿನ ಆದ್ರಳ್ಳಿ, ಅಕ್ಕಿಗುಂದ, ನೆಲೂಗಲ್, ದೇವಿಹಾಳ, ನಾದಿಗಟ್ಟಿ ಗುಡ್ಡದ ಸೆರಗಿನಲ್ಲಿ ಇರುವ ಕ್ರಷರ್ಗಳಿಂದ ಇತ್ತೀಚಿನ ವರ್ಷಗಳಲ್ಲಿ ಎಂ ಸ್ಯಾಂಡ್, ಜಲ್ಲಿಕಲ್ಲು, ಖಡಿ ಸೇರಿ ಕಲ್ಲಿನ ಉತ್ಪನ್ನಗಳು ಹಗಲು-ರಾತ್ರಿ ಸಾಗಾಟವಾಗುತ್ತಿವೆ. ಓವರ್ ಲೋಡ್, ಓವರ್ ಸ್ಪೀಡ್ ಸೇರಿ ಕಾನೂನಿನ ಮಿತಿ ಮೀರಿ ಸಂಚರಿಸುವ ಇವುಗಳ ಅಬ್ಬರಕ್ಕೆ ಜನ ಹೈರಾಣಾಗಿದ್ದಾರೆ. ಆದರೆ, ಕಳೆದ 1 ತಿಂಗಳಿಂದ ಲಾಕ್ಡೌನ್ ಘೊಷಣೆಯಾದಾಗಿನಿಂದ ಇವುಗಳ ಅಬ್ಬರ ನಿಂತಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ವಿನಾಯಿತಿ ಮತ್ತು ಬಹು ಬೇಡಿಕೆ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಕ್ರಷರ್ಗಳ ಕಾರ್ಯ, ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್ಗಳ ಸಂಚಾರದ ಅಬ್ಬರ ಪ್ರಾರಂಭವಾಗಿರುವುದು ಜನತೆಯ ನೆಮ್ಮದಿ ಕದಡಿವೆ.
ಪರವಾನಗಿ ಇಲ್ಲದೆ ಎಂ ಸ್ಯಾಂಡ್ ಮತ್ತು ಜಲ್ಲಿಕಲ್ಲು ಸಾಗಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಪೊಲೀಸರು ನಿಗಾವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.