ವಿಜಯಪುರ: ರಣಕಹಳೆ ಮೊಳಗಿಸಿದ್ದೇನೆ, ಮುಂದಿನ ಚುನಾವಣೆವರೆಗೂ ಇದು ನಿಲ್ಲೋದಿಲ್ಲ, ನಾನೇನು ಎಂದು ತೋರಿಸುತ್ತೇನೆಂದು ಶಾಸಕ ಯಶವಂತರಾಯಗೌಡ ಪಾಟೀಲ ಪರೋಕ್ಷವಾಗಿ ಶಾಸಕ ಎಂ.ಬಿ. ಪಾಟೀಲಗೆ ಟಾಂಗ್ ನೀಡಿದರು.
ಎಷ್ಟು ಹೇಳಿದರೂ ನಿಮ್ಮ ನಡವಳಿಕೆ ಬದಲಾಗಲಿಲ್ಲ. ಹೊಂದಾಣಿಕೆ ರಾಜಕಾರಣ ಬಿಡಲಿಲ್ಲ. ಮತ್ತೊಬ್ಬರ ಕ್ಷೇತ್ರದಲ್ಲಿ ಮೂಗು ತೂರಿಸುವುದು ಬಿಡಲಿಲ್ಲ. ಇನ್ನಾದರೂ ನೀರಾವರಿ ಗುಂಗಿನಿಂದ ಹೊರಬನ್ನಿ. ನಾನು ನಾನು ಎಂಬ ಅಹಂ ಬಿಡಿ. ಬಸ್ಮಾಸುರನೇ ಉಳಿದಿಲ್ಲ. ಮುಂದೆ ಆ ಸ್ಥಿತಿ ನಿಮಗೂ ಬರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿ ಕಾರಿದರು.
ಕನಸಿನಲ್ಲಿ ಕೂಸು ಹುಟ್ಟಲ್ಲ:
ನೀರಾವರಿ ಕನಸು ಕಂಡವರು ನೀವೊಬ್ಬರೇ ಅಲ್ಲ. ಕನಸು ಕಂಡ ಮಾತ್ರಕ್ಕೆ ಮಕ್ಕಳಾಗಲ್ಲ, ಕನಸಿನಲ್ಲಿ ಕೂಸು ಹುಟ್ಟಲ್ಲ. ಅದಕ್ಕಾಗಿ ಪರಿಶ್ರಮ ಪಡಬೇಕು. ಕೆರೆಗೆ ನೀರು ತುಂಬುವ ಯೋಜನೆ ಕನಸು ಚಿಗುರೊಡೆದಿದ್ದೇ ಇಂಡಿ ಕ್ಷೇತ್ರದಿಂದ. ಗೋವಿಂದ ಕಾರಜೋಳ ಹಾಗೂ ಕೆ.ಎಸ್. ಈಶ್ವರಪ್ಪ ಸಹ ನೀರಾವರಿಗಾಗಿ ಕನಸು ಕಂಡವರು. ನಿಮ್ಮ ಒಬ್ಬರಿಂದಲೇ ನೀರಾವರಿ ಆಗಿದೆ ಎಂಬುದು ತಲೆಯಿಂದ ತೆಗೆದು ಹಾಕಿ. ಸಿದ್ದರಾಮಯ್ಯ ಅವರ ಪಾದಯಾತ್ರೆಯ ಫಲ, ಜಿಲ್ಲೆಯ ಸರ್ವ ಶಾಸಕರ ಬೆಂಬಲ ಹಾಗೂ ಸಹಕಾರದಿಂದ ನೀರಾವರಿ ಯೋಜನೆಗಳು ಅನುಷ್ಟಾನಗೊಂಡಿವೆ ಎಂದರು.
ನೀರಾವರಿ ಟೀಂ ವರ್ಕ್:
ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳು ಕೇವಲ ಒಬ್ಬರಿಂದಾಗಿದ್ದಲ್ಲ. ಅದೊಂದು ಟೀಂ ವರ್ಕ್. ಅನೇಕರ ಮನವಿ ಮತ್ತು ಒತ್ತಾಸೆಯಿಂದ ನೀರಾವರಿ ಯೋಜನೆಗಳಾಗಿವೆ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಚುನಾವಣೆ ಪೂರ್ವ ಘೋಷಿಸಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದು ಸರ್ಕಾರದ ಆದ್ಯತೆಯಾಯಿತು. ಸಿದ್ದರಾಮಯ್ಯ ನಿಮಗೊಂದು ಅವಕಾಶ ಕೊಟ್ಟವರು. ಆಗ ನಾವೆಲ್ಲರೂ ಸಹಕಾರ ಕೊಟ್ಟೆವು. ಪರಿಣಾಮ ನೀರಾವರಿ ಯೋಜನೆಗಳಾದವು. ಅಷ್ಟಕ್ಕೂ ಸಮಗ್ರ ನೀರಾವರಿ ಏನಾಗಿಲ್ಲ. ಸಮಗ್ರ ನೀರಾವರಿ ಎಂದರೇನು? ಕೇವಲ ಕೆರೆ ತುಂಬಿದ ಮಾತ್ರ ಸಮಗ್ರ ನೀರಾವರಿ ಅಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶೇ.90ರಷ್ಟು ನೀರಾವರಿಯಾದಾಗ ಸಮಗ್ರ ನೀರಾವರಿ ಎನ್ನಿಸಿಕೊಳ್ಳಲಿದೆ ಎಂದು ನಾನು ಭಾವಿಸಿದ್ದೇನೆ ಎಂದರು.
ನೀರಾವರಿ ಮಂತ್ರಿಯಾಗಿದ್ದಾಗ ಕೇವಲ ಭೌತಿಕ ಕಾಮಗಾರಿಗೆ ಆದ್ಯತೆ ನೀಡಿದಿರಿ. ನೀರಾವರಿ ನಿಮ್ಮ ಉದ್ದೇಶ ಆಗಿರಲಿಲ್ಲ. ಆಂಧ್ರ ಗುತ್ತಿಗೆದಾರರ ಮೂಲಕ ಲಾಭ ಮಾಡಿಕೊಳ್ಳುವ ಉದ್ದೇಶ ನಿಮ್ಮದಾಗಿತ್ತು. ಅದೇ ಪುನರ್‌ವಸತಿ ಮತ್ತು ಪುನರ್ ನಿರ್ಮಾಣಕ್ಕೆ ನೀವು ಹಣ ನೀಡಲಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಬದಲಾಗಿದಿದ್ದರೆ ಬದಲು ಮಾಡುತ್ತೇನೆ:
ಒಂದೊಮ್ಮೆ ನಾವು ಒಳ್ಳೆಯ ಗೆಳೆಯರಾಗಿದ್ದವರು. ಈಗಲಾದರೂ ಬದಲಾಗಿ ಇಲ್ಲದಿದ್ದರೆ ನಾನೇ ಬದಲು ಮಾಡುತ್ತೇನೆ ಎನ್ನುವ ಮೂಲಕ ಶಾಸಕ ಯಶವಂತರಾಯಗೌಡ ಸೂಕ್ಷ್ಮವಾಗಿ ಶಾಸಕ ಎಂ.ಬಿ. ಪಾಟೀಲರಿಗೆ ತಿಳಿಸಿದರು.
ಸಕ್ಕರೆ ಕಾರ್ಖಾನೆಗೆ ಅಡ್ಡಿಪಡಿಸಿದವರು ನೀವು. 1990-92 ದಿಂದ ನಿಮ್ಮ ರಾಜಕಾರಣ ಆರಂಭವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಎಷ್ಟು ಹೊಂದಾಣಿಕೆ ರಾಜಕಾರಣ ಮಾಡಿದ್ದೀರಿ ಎಂಬುದು ನಾನು ಬಯಲಿಗೆಳೆಯಬೇಕಾಗುತ್ತದೆ. 2018 ರಲ್ಲಿ ನನ್ನ ವಿರುದ್ದ ಏನೆಲ್ಲ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ. ಆದರೂ ನನ್ನ ಜನ ನನ್ನ ಕೈಬಿಟ್ಟಿಲ್ಲ ಎಂದರು.
ಆರೇಳು ಚುನಾವಣೆ ಎದುರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ದಿಕ್ಕು ಬದಲಿಸಿದ್ದೇನೆ. ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದೇನೆ. ಅದಕ್ಕಾಗಿಯೇ ಜನ ನನ್ನನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿದ್ದಾರೆ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಅಡ್ಡಿಪಡಿಸಿದವರು. ನನ್ನ ರಾಜಕಾರಣದಲ್ಲಿ ನಾನು ಯಾರನ್ನೂ ಕೆಣಕಿಲ್ಲ, ಕೆಣಕಿದರೆ ಬಿಡಲ್ಲ ಎಂದು ಕಿಡಿಕಾರಿದರು.
ಯಾವ ಭಗೀರಥ?
ಭಗೀರಥ...ಭಗೀರಥ ಎಂದು ಮಾಧ್ಯಮದವರೂ ಬರೆಯುತ್ತೀರಿ. ಭಗೀರಥ ಯಾರು ಗೊತ್ತಾ? ಅವನ ಸಾಧನೆ ಮುಂದೆ ಇವರೆಲ್ಲಿ ಎಂದು ಪ್ರಶ್ನಿಸಿದ ಅವರು, ಸಿದ್ದೇಶ್ವರ ಸಂಸ್ಥೆಯಿಂದ ಎಂ.ಬಿ. ಪಾಟೀಲರಿಗೆ ಪ್ರಶಸ್ತಿ ಸಿಕ್ಕಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಕೊಟ್ಟವರು ಅವರೇ ತೆಗೆದುಕೊಂಡವರೂ ಅವರೇ, ಕೊಟ್ಟರೆ ಪ್ರಶಸ್ತಿಗಳಿಗೂ ಬೆಲೆ ಬರಬೇಕು. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳಬಾರದು ಎಂದ ಅವರು, ಇವರು ಜಗದ್ಗುರು ಮೇಲೆ ಎಫ್‌ಐಆರ್ ಮಾಡಿದ್ದು ಜಿಲ್ಲೆಯ ಜನ ಮರೆತಿಲ್ಲ ಎಂದರು.
ಒಂದೊಮ್ಮೆ ಒಳ್ಳೆಯ ಗೆಳೆಯರಿದ್ದವರು. ಬದಲಾಗಿ ಆಗದಿದ್ದರೆ ಬದಲು ಮಾಡುವೆ ಎಂದರಲ್ಲದೇ, ಮುಂದಿನ ಚುನಾವಣೆಯಲ್ಲಿ ಬಬಲೇಶ್ವರದಿಂದ ಎಂ.ಬಿ. ಪಾಟೀಲರ ವಿರುದ್ಧ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಆಗ ಪ್ರಸಂಗ ಹೇಗೆ ಬರುತ್ತದೋ ನೋಡೋಣ ಎಂದರು.