ಹಾಸನ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಪೂರ್ವಗ್ರಹ ಪೀಡಿತರಾಗಿ ನನ್ನ ಕುಟುಂಬದ ಮೇಲೆ ಆರೋಪ ಮಾಡುವ ಮೂಲಕ ಲೋಕಸಭಾ ಚುನಾವಣೆಯ ಲಾಭಗಾಗಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸುತ್ತಿರುವ ರಾಮಸ್ವಾಮಿ, ಕಾಂಗ್ರೆಸ್ ನಾಯಕರ ಒಲವು ಗಳಿಸಲು ಇಂತಹ ಆರೋಪ ಮಾಡುತ್ತಿದ್ದಾರೆ.ಚುನಾವಣೆ ಮೂರು ತಿಂಗಳಿರುವಾಗ ಇಂತಹ ಅಪಪ್ರಚಾರ ಮಾಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಯಾವುದೇ ಒಂದು ಆರೋಪ ಮಾಡಬೇಕಾದರೆ ಸತ್ಯಾ ಸತ್ಯತೆಯನ್ನು ತಿಳಿದು, ಪರಾಮರ್ಶಿಸಿ ಹೋರಾಟಗಳಿಗೆ ಇಳಿಯಬೇಕು.ಆದರೆ ಎಟಿಆರ್ ವರ್ಷದ ಹಿಂದೆ ನಡೆದಿರುವ ಘಟನೆ ಘಟನೆ ಹಿಡಿದುಕೊಂಡು ಈಗ ಬಂದಿದ್ದಾರೆ. ನಮ್ಮ ಕುಟುಂಬ ಬೇನಾಮಿ ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.
ಟಿವಿಯಲ್ಲಿ ಬಂದಿದ್ದನ್ನು ನೋಡಿ ಅವರನ್ನು ಕರೆಯಿಸಿಕೊಂಡೆ ಅನ್ನುತ್ತಾರೆ. ನಾನು ಜಿಲ್ಲೆಯಲ್ಲಿ ಯಾರ ಮೇಲೆ ದೌರ್ಜನ್ಯ ಮಾಡಿದ್ದೇನೆ, ಯಾವ ಆಸ್ತಿ ಒಡೆಸಿದ್ದೇನೆ. ಅವರು ಹೇಗೆ ಮೆರವಣಿಗೆ ಮಾಡಿಸಿದರು, ಎಲ್ಲಿಂದ ಜನ ಕರೆತಂದರು ಎಲ್ಲ ಗೊತ್ತಿದೆ. ಇದೆಲ್ಲ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರ ಬಾಳ್ಳು ಜಗನ್ನಾಥ್,ಜಿ.ಪಂ ಸದಸ್ಯ ಕುಮಾರಸ್ವಾಮಿ ಇದ್ದರು.
ಇ-ಹರಾಜು ಕ್ರಮ ಸರಿಯಲ್ಲ:
ಜಿಲ್ಲೆಯಲ್ಲಿ ಕಾಫಿ ಬೆಳಗಾದರೂ ಕಾಡಾನೆ ಹಾವಳಿ ಅತಿವೃಷ್ಟಿ ಅನಾವೃಷ್ಟಿಯಿಂದ ಸಂಕಷ್ಟದಲ್ಲಿರುವ ಸಮಯದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲಕ್ಕೆ ಕಾಫಿ ತೋಟಗಳನ್ನು ಇ- ಹರಾಜಿಗೆ ಮುಂದಾಗಿರುವುದು ಸರಿಯಲ್ಲ ಎಂದು ಎಚ್ ಡಿ ರೇವಣ್ಣ ಕಿಡಿಕಾರಿದರು.
ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ತೀರ್ಮಾನ ಕೈಗೊಂಡು ಕಾಫಿ ಬೆಳೆಗಾರರ ರಕ್ಷಣೆಗೆ ಬರಬೇಕು. ದೇಶದಲ್ಲಿ ಸುಮಾರು 2,99,000 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಮಾಡುತ್ತಿದ್ದು ಪ್ರಪಂಚ ದಲ್ಲಿಯೇ 6ನೇ ಸ್ಥಾನದಲ್ಲಿದೆ. ಇದೀಗ ಬ್ಯಾಂಕಿನಿಂದ ಸಾಲ ಪಡೆದಿರುವ ಹಿನ್ನೆಲೆಯಲ್ಲಿ ಸುಸ್ತಿದಾರರ ಕಾಫಿ ತೋಟಗಳನ್ನು ಈ ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿರುವುದು ಸಣ್ಣ ಮಧ್ಯಮ ವರ್ಗದ ಕಾಫಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ ಆದ್ದರಿಂದ ಈ ಪ್ರಕರಣ ಕುರಿತು ಸರ್ಕಾರ ಗಂಭೀರ ವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು
ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಇತ್ತೀಚಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿದೆ.ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೂಲಕ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.