ಹಾಸನ: ಐದು ವರ್ಷಗಳ ಕಾಲ ಅಧಿಕಾರಕ್ಕೆ ಬಂದವರು ಒಂದು ಊರಿನ ಹೆಸರನ್ನೇ ಬದಲಾಯಿಸಲು ಅಧಿಕಾರ ಕೊಟ್ಟವರು ಯಾರು? ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬಂದಿರುವ ಕನ್ನಡ ಪದಗಳನ್ನು ಅಳಿಸುವ ಅಧಿಕಾರ ನಿಮಗಿಲ್ಲ ಎಂದು ಪಕ್ಷದ ಹೆಸರು ಹೇಳದೇ ಸರ್ಕಾರದ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತವ ಬಿಳೆಮಲೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಮಾನಸ ಗಂಗೋತ್ರಿ ಮೈಸೂರು, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಸಾಪ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಓದು ಮತ್ತು ಅರ್ಥ್ಯೆಸುವಿಕೆ’ ಕುರಿತು 4 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಅರ್ಥವಾಗಬೇಕಾದರೆ ವ್ಯಾಸ, ಪಂಪನ ಜತೆಗೆ ಯಕ್ಷಗಾನವೂ ಗೊತ್ತಿರಬೇಕು. ಮೊಬೈಲ್‌ನಲ್ಲಿ ಬರುವ ವಾಟ್ಸಾಪ್ ಮೆಸೇಜ್ ನೋಡಿಕೊಂಡು ಅದನ್ನು ಪಾರ್ವರ್ಡ್ ಮಾಡಿಕೊಳ್ಳುವ ಬದಲು ಈ ತರಹದ ಮನಸ್ಸು ಕೊಟ್ಟರೇ ಸಂಸ್ಕೃತಿ ಉಳಿಯುತ್ತದೆ ಎಂದರು.
ಸಂಸ್ಕೃತ ಕನ್ನಡದ ಸಂಬಂಧ, ಪಾಕೃತ ಕನ್ನಡದ ಸಂಬಂಧ ಬಗ್ಗೆ ಹೆಚ್ಚು ಕೆಲಸ ಆಗಬೇಕು. ಕನ್ನಡ ಕನ್ನಡಗಳ ನಡುವೆ ಇರುವ ಸಂಬಂಧವನ್ನು ಇನ್ನು ಗಂಭೀರವಾಗಿ ಅಭ್ಯಾಸ ಮಾಡಬೇಕಾಗಿದೆ. ಕೃಷ್ಣದೇವರಾಯ, ಚಾಲುಕ್ಯರು, ವಿಕ್ರಮಾದಿತ್ಯ, ಎರಡನೇ ಪುಲಿಕೇಶಿ ಬಾದಾಮಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಆಳಿದ್ದರು. ವಿಕ್ರಮಾದಿತ್ಯನು ಊರಿನ ಹೆಸರು ಬದಲಾಯಿಸಲಿಲ್ಲ. ಆದರೆ ನಾವುಗಳು ಊರಿನ ಹೆಸರು ಬದಲಾಯಿಸಿಕೊಂಡು ನಮ್ಮ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು.
ಅಂತಹ ಕೃಷ್ಣದೇವರಾಯ, ನೃಪತುಂಗನೇ ಊರಿನ ಹೆಸರನ್ನು ಬದಲಾಯಿಸಲಿಲ್ಲ. ಐದು ವರ್ಷ ಅಧಿಕಾರಕ್ಕೆ ಬಂದ ಇವರಿಗೆ ಯಾರು ಹೆಸರು ಬದಲಾಯಿಸಲು ಅಧಿಕಾರ ಕೊಟ್ಟವರು? ಯಾರೋ ಒಬ್ಬ ಸ್ವಾಮೀಜಿ ಪ್ರವಚನ ಹೇಳಿ ನಾಳೆಯಿಂದ ವಿಷ್ಣುಪುರ ಎಂದು ಹೆಸರು ಬದಲಿಸಿ ಎಂದು ಹೇಳುತ್ತಾನೆ. ಹಾಗೆ ಮಾಡಲು ಸಾಧ್ಯವೇ? ಒಂದು ಊರಿಗೆ ತನ್ನದೆಯಾದ ಪರಂಪರೆ ಇರುತ್ತದೆ. ಹೊಸ ಊರು ನಿರ್ಮಾಣ ಮಾಡಿದರೆ ಹೊಸ ಹೆಸರು ಇಡಬಹುದು. ಆದರೆ ಸಾವಿರಾರು ವರ್ಷಗಳಿಂದ ಬಂದಂತಹ ಕನ್ನಡ ಪದಗಳನ್ನು ಅಳಿಸುವ ಅಧಿಕಾರ ನಿಮಗಿಲ್ಲ ಎಂದು ಗುಡುಗಿದರು.
ಕನ್ನಡ ಭಾಷೆ ಮೇಲೆ ಸ್ವಾಭಿಮಾನ ಇರಬೇಕು. ಆದರೆ ಇಂದು ಕನ್ನಡದ ಮೇಲಿನ ಸ್ವಾಭಿಮಾನ ಕಡಿಮೆ ಆಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಠ ಮಾಡುವವರು ಕನ್ನಡ ಮಾಧ್ಯಮದವರೆ. ಕನ್ನಡ ಒಂದು ಪರಿಶ್ರಮದ ಭಾಷೆಯಾಗಿ ಉಳಿಯಬೇಕು. ಇಂಗ್ಲಿಷ್, ಫ್ರೆಂಚ್, ಹಿಂದಿ, ಉರ್ದು ಎಲ್ಲ ಭಾಷೆಗಳನ್ನು ಕಲಿಯಿರಿ. ಆದರೆ ಕನ್ನಡದ ಮೇಲಿನ ಅಭಿಮಾನ ಕಡಿಮೆಯಬಾರದು ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಶಾಸ್ತ್ರೀಯ ಪಠ್ಯಗಳನ್ನು ಓದುವ ಆಸಕ್ತಿಗಳೇ ಇಂದು ಸತ್ತು ಹೋಗಿದೆ. ಪದವಿಯಲ್ಲಿ ಪಾಠ ಮಾಡುವವರೇ ಈ ಪಾಠ ಬೇಡ. ಇದು ಮಕ್ಕಳಿಗೆ ಅರ್ಥವಾಗುವುದಿಲ್ಲ. ಈ ಪಾಠ ಇದ್ದರೇ ಮಕ್ಕಳು ತರಗತಿಗೆ ಬರಲ್ಲ ಎನ್ನುವ ಮಾತುಗಳನ್ನು ಶಿಕ್ಷಕರು ಹೇಳುತ್ತಿದ್ದಾರೆ. ಶಿಕ್ಷಕರಿಗೆ ಯಾವುದು ಕಷ್ಟ ಇರುತ್ತದೆ ಅದು ಮಕ್ಕಳಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿ ಮಕ್ಕಳನ್ನು ಮುಂದಿಟ್ಟುಕೊಂಡು ತಮಗೆ ಸುಲಭವಾದ ಪಠ್ಯ ರೂಪಿಸಿಕೊಳ್ಳುವ ಜಾಯಮಾನವನ್ನು ರೂಢಿಸಿಕೊಂಡಿದ್ದೇವೆ. ಎಲ್ಲ ವಿಶ್ವವಿದ್ಯಾಲಯದಲ್ಲೂ ಕೂಡ ಶಬ್ದಮಣಿ ದರ್ಪಣಂ ಕೃತಿ ಕೈಬಿಟ್ಟಿದ್ದಾರೆ. ಕ್ಲಿಷ್ಟಕರವಾದ ಕಾವ್ಯಗಳನ್ನು ಬಿಟ್ಟುಬಿಟ್ಟಿದ್ದಾರೆ. ಶಾಸ್ತ್ರೀಯ ಗ್ರಂಥಗಳು, ಶಾಸ್ತ್ರೀಯ ಕಾವ್ಯಗಳು ಅಧ್ಯಯನ ವ್ಯಾಪ್ತಿಯನ್ನು ಕಳೆದುಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಎನ್.ಎಸ್. ತಾರನಾಥ್, ಸಿ.ಎಸ್. ಶಿವಕುಮಾರಸ್ವಾಮಿ, ಆರ್. ಚಲಪತಿ, ಎನ್.ಎಸ್. ಅನ್ನಪೂರ್ಣಾ, ಶಿಬಿರದ ಸಂಚಾಲಕರಾದ ಸಿ.ಎ. ಶಶಿಧರ್ ಇತರರು ಉಪಸ್ಥಿತರಿದ್ದರು.