ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಸಲಹೆ
ಶ್ರೀರಂಗಪಟ್ಟಣ : ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿ ಗ್ರಾಮದ ಜನರೂ ಊರಿನ ದೊಡ್ಡ ಜಾತ್ರೆಯಂತೆ ಸಂಭ್ರಮಿಸಬೇಕು ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಹೇಳಿದರು. ತಾಲೂಕಿನ ಚಂದಗಾಲು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಮಾತೃಭಾಷೆಯಾಗಿ ಕನ್ನಡ ಜೀವಂತವಾಗಿದೆ. ಕಣ ಕಣದಲ್ಲೂ ಭಾಷೆ ಸೊಗಡು ಮೇಳೈಸುತ್ತಿದೆ.
ಈ ನೆಲದಲ್ಲಿ ನವೆಂಬರ್ ತಿಂಗಳಲ್ಲಿ ಮಾತ್ರವಲ್ಲ, ವರ್ಷದ ಪ್ರತಿದಿನವೂ ಕನ್ನಡಮ್ಮನ ಸಂಭ್ರಮ ಹಸಿರಾಗಿದೆ. ಇಂತಹ ಜಿಲ್ಲೆಗೆ ಇನ್ನಷ್ಟು ಮೆರುಗು ನೀಡಲು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ದೊರಕಿದೆ. ಹಾಗಾಗಿ ಎಲ್ಲರೂ ಈ ಸಂಭ್ರಮದಲ್ಲಿ ಒಂದಾಗೋಣ ಎಂದರು. ಸಹಿತ್ಯ ಸಮ್ಮೇಳನಕ್ಕೆ ಪ್ರತಿ ಗ್ರಾಮದ ಜನರು ಆಗಮಿಸಲು ಸೂಕ್ತ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಎಲ್ಲರೂ ಕುಟುಂಬದ ಸಮೇತ ಆಗಮಿಸಿ ಕನ್ನಡಮ್ಮನ ಜಾತ್ರೆಯಲ್ಲಿ ಭಾಗಿಯಾಗಬೇಕು ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮನವಿ ಮಾಡಿದರು.
ಕಾರ್ಯಕ್ರಮದ ಆಯೋಜಕ, ಕಸಾಪ ಹೋಬಳಿ ಅಧ್ಯಕ್ಷ ಚಂದಗಾಲು ಶಂಕರ್ ಮಾತನಾಡಿ, ಗ್ರಾಮದಲ್ಲಿ ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವ ಸಂಭ್ರಮಿಸಲಾಗುತ್ತದೆ. ಕನ್ನಡದ ಕಟ್ಟಾಳುಗಳನ್ನು ಸಂಘಟಿಸುವ ಕಾರ್ಯ ನಡೆಯುತ್ತಿದೆ. ಈ ಬಾರಿ ತಹಸೀಲ್ದಾರ್ ಪರಶುರಾಮ ಅವರು ಆಗಮಿಸಿ ಚೈತನ್ಯ ತುಂಬಿದ್ದಾರೆ ಎಂದರು.
ನಗುವನಹಳ್ಳಿ ಗ್ರಾಪಂ ಸದಸ್ಯರಾದ ರಮೇಶ್, ಮಹೇಂದ್ರಾಚಾರಿ, ಶಿಕ್ಷಕ ಬಲ್ಲೇನಹಳ್ಳಿ ಶಂಕರ್, ವಕೀಲ ಸಿ.ಎಸ್.ವೆಂಕಟೇಶ್, ಮುಖಂಡರಾದ ದರಸಗುಪ್ಪೆ ಲೋಕೇಶ್, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನಾಚಾರಿ, ಚಂದಗಾಲು ಡೇರಿ ಅಧ್ಯಕ್ಷ ಜ್ಞಾನೇಶ, ಕಾರ್ಯದರ್ಶಿ ನಾಗೇಂದ್ರ, ಸೇವಾ ಸಹಕಾರ ಸಂಘದ ಕುಮಾರ್ ಇತರರು ಉಪಸ್ಥಿತರಿದ್ದರು