ಜಿಲ್ಲೆ

ಊರಿಗೇ ಕಂಟಕವಾದ ತಪ್ಪು ನಿರ್ಧಾರ


ವಾದಿರಾಜ ವ್ಯಾಸಮುದ್ರ ಕಲಬುರಗಿ
ಒಂದು ಕ್ಷಣದ ತಪ್ಪು ನಿರ್ಧಾರ ಇಡೀ ರಾವೂರ ಗ್ರಾಮವನ್ನು ಎಂಥ ಶಿಕ್ಷೆಗೆ ದೂಡಿದೆ ನೋಡಿ. ಊರಲ್ಲಿ ಸಿದ್ಧಲಿಂಗೇಶ್ವರ ದೇವಸ್ಥಾನದ ರಥೋತ್ಸವ ನಡೆಸಲು ನಿರ್ಧರಿಸಿದ ಟ್ರಸ್ಟ್ ಕಮಿಟಿ, ಲಾಕ್ಡೌನ್ ಕಡ್ಡಾಯ ಎಂಬ ಜಿಲ್ಲಾಡಳಿತದ ಆದೇಶಕ್ಕೆ ಸವಾಲೆಸೆದು ರಥವನ್ನು ಎಳೆದೇ ಬಿಟ್ಟಿತು. ಇದಕ್ಕೆ ನೂರಾರು ಜನರೂ ಸಾಕ್ಷಿಯಾದರು.
ಇವರ ಈ ತಪ್ಪು ನಿರ್ಧಾರ ಇಂದು ಇಡೀ ಊರಲ್ಲಿ ಭಯ ಮೂಡಿಸಿದೆ. ಗ್ರಾಮವನ್ನೇ ಸೀಲ್ಡೌನ್ ಮಾಡಿ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಜನ ಹೊರಬರದಂತೆ ಮತ್ತು ಅವರ ಆರೋಗ್ಯ ಕಾಪಾಡಲು ಆಶಾ, ಆರೋಗ್ಯ ಕಾರ್ಯಕರ್ತೆಯರು, ಪೊಲೀಸರು ಬಿಡಾರ ಹೂಡಿದ್ದಾರೆ.
ಎಲ್ಲೆಡೆ ಕರೊನಾ ಸೋಂಕು ಅಬ್ಬರಿಸುತ್ತಿದೆ. ಜಿಲ್ಲೆಯಲ್ಲಿ 22 ಸೋಂಕಿತ ಪ್ರಕರಣ ವರದಿಯಾಗಿದ್ದು, ಮೂವರು ಪ್ರಾಣ ಬಿಟ್ಟಿದ್ದರೆ, ಮೂವರು ಗುಣಮುಖರಾಗಿದ್ದಾರೆ. ಉಳಿದ 16 ಜನರ ಸ್ಥಿತಿ ಹೀಗೆ ಎಂದು ಹೇಳಲಾಗದು. ದಿನೇದಿನೆ ಕರೊನಾ ಪಟ್ಟಿಗೆ ಜಿಲ್ಲೆಯ ಅಂಕಿ-ಅಂಶಗಳು ಸೇರುತ್ತಿದ್ದರಿಂದ ಭಯವಂತೂ ಇದೆ.
ಜಿಲ್ಲೆಯಿಂದ ಈ ಸೋಂಕು ಹೊಡೆದೋಡಿಸಲು ಜನ ಮನೆಯಿಂದ ಹೊರ ಬರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗುಂಪು ಸೇರಬಾರದು ಎಂಬೆಲ್ಲ ಷರತ್ತು ಹಾಕಿದ ಜಿಲ್ಲಾಡಳಿತ ಜಾತ್ರೆ, ಸಂತೆ, ಧಾರ್ಮಿಕ ಸಭೆ, ಪ್ರಾರ್ಥನೆ ಹೀಗೆ ಎಲ್ಲವನ್ನೂ ನಿಷೇಧಿಸಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಇಷ್ಟೆಲ್ಲ ಗೊತ್ತಿದ್ದೂ ಊರಲ್ಲಿ ನೂರಾರು ಜನ ಸೇರಿ ರಥೋತ್ಸವ ಮಾಡಿದ್ದಾರೆಂದರೆ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಸೋಂಕಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ ಎನ್ನಬೇಕಾಗುತ್ತದೆ. ತೇರು ಎಳೆಯಲೇಬೇಕೆಂದು ಸಲಹೆ ಕೊಟ್ಟವರಾರು? ಸರ್ಕಾರದ ಆದೇಶ ಗಮನಕ್ಕೆ ಏಕೆ ಬರಲಿಲ್ಲ? ಉದ್ದೇಶಪೂರ್ವಕವಾಗಿ ಮಾಡಿದ್ದರೆ ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ.
ಕರೊನಾ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯವರು ಸಮರ ಸಾರಿದ್ದಾರೆ. ಹಗಲು ರಾತ್ರಿ ನಿದ್ರೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಜನತೆ ಸಹಕರಿಸುವುದನ್ನು ಬಿಟ್ಟು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಹಲವರು.
ಈ ರಥೋತ್ಸವದಲ್ಲಿ ರಾವೂರ ಜನರಷ್ಟೇ ಪಾಲ್ಗೊಂಡಿದ್ದರೆ ಇಲ್ಲ, ಅನ್ಯ ಗ್ರಾಮದವರೂ ಬಂದಿದ್ದರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಇನ್ನು ರಥೋತ್ಸವ ನಡೆಸಿದವರು ಅಶಿಕ್ಷಿತರೇನಲ್ಲ. ಟ್ರಸ್ಟ್ ಸದಸ್ಯರೆಲ್ಲರೂ ಸುಶಿಕ್ಷಿತರೇ ಆಗಿರುವುದು ಗಮನಾರ್ಹ.
ಇವರು ಎಸಗಿದ ತಪ್ಪಿಗೆ ಚಿತ್ತಾಪುರ ಸಿಡಿಪಿಒ, ವಾಡಿ ಪಿಎಸ್ಐ ಅಮಾನತು ಶಿಕ್ಷೆ ಎದುರಿಸಬೇಕಾಗಿದೆ. ಸೇಡಂ ಸಹಾಯಕ ಆಯುಕ್ತರು ಮತ್ತು ಚಿತ್ತಾಪುರ ತಹಸೀಲ್ದಾರ ಸೇರಿ ಹಲವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸುಮಾರು 100 ಜನರ ರಕ್ತ ಸ್ಯಾಂಪಲ್ ಪರೀಕ್ಷೆಗಾಗಿ ಕಳಿಸಿಕೊಡಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ಮತ್ತು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಸ್ಥಿತಿಗತಿಯ ಅವಲೋಕನ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೆಲ ಟ್ರಸ್ಟಿಗಳು ಸೇರಿ 20 ಪ್ರಮುಖರ ವಿರುದ್ಧ ಪ್ರಕರಣ ದಾಖಲಾಗಿದ್ದು, 17 ಜನರನ್ನು ಬಂಧಿಸಲಾಗಿದೆ. ಇವರನ್ನು ಹೊರತುಪಡಿಸಿ ಇನ್ನೂ 200 ಜನರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾವೂರ ರಥೋತ್ಸವಕ್ಕೆ ಸಂಬಂಧಿಸಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 17 ಜನರನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಕೆಲ ಪೊಲೀಸರು ಬಿಡಾರ ಹೂಡಿದ್ದಾರೆ. ರಾವೂರ ಜನ ಹೊರತುಪಡಿಸಿ ಬೇರಾವ ಗ್ರಾಮಸ್ಥರು, ಸ್ವಾಮೀಜಿಗಳು ಇಲ್ಲಿಗೆ ಬಂದಿಲ್ಲ.
| ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಎಸ್ಪಿ