ಜಿಲ್ಲೆ

ಊಟಕ್ಕೆ ವಾಹನ ಚಾಲಕರ ಪರದಾಟ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಜ. 12ರಿಂದ ಏರ್ಪಡಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ಪ್ರತಿನಿಧಿಗಳಿಗೆ ಊಟ, ವಸತಿ, ಸಾರಿಗೆ ಸೇರಿ ಸಕಲ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರತಿನಿಧಿಗಳು ಸರಿಯಾದ ಸಮಯಕ್ಕೆ ನಿಗದಿಪಡಿಸಿದ ಸ್ಥಳಗಳಿಗೆ ತಲುಪಲು ಹಗಲು ರಾತ್ರಿ ಶ್ರಮಿಸುತ್ತಿರುವ ವಾಹನ ಚಾಲಕರಿಗೇ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ.
ಯುವ ಜನೋತ್ಸವಕ್ಕಾಗಿ ವಿವಿಧ ರಾಜ್ಯಗಳಿಂದ ಸುಮಾರು 7500 ಜನಪ್ರತಿನಿಧಿಗಳು ಆಗಮಿಸಿದ್ದಾರೆ. ಅವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹು-ಧಾ ಅವಳಿನಗರದಲ್ಲಿನ ಸುಮಾರು 39 ಶಾಲೆಗಳಿಂದ 200ಕ್ಕೂ ಹೆಚ್ಚು ವಾಹನಗಳನ್ನು ಪಡೆಯಲಾಗಿದೆ. ಅಂದಾಜು ಜ. 11ರಿಂದ ಈ ವಾಹನಗಳ ಚಾಲಕರು ಜಿಲ್ಲೆಗೆ ಆಗಮಿಸಿದ ಪ್ರತಿನಿಧಿಗಳನ್ನು ಮೊದಲ ದಿನದಿಂದಲೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೇ ಸರಿಯಾದ ವ್ಯವಸ್ಥೆ ಮಾಡದಿರುವುದು ಸರ್ಕಾರದ ಕಾರ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ಉತ್ಸವಕ್ಕೆ ಚಾಲನೆ ನೀಡುವ ಮುನ್ನಾ ದಿನ ಮಿನಿ ವಿಧಾನಸೌಧದಲ್ಲಿ ವಾಹನ ಚಾಲಕರಿಗೆ ಪ್ಯಾಕ್ ಮಾಡಿದ ಆಹಾರ ನೀಡಲಾಗಿತ್ತು. ಅದೂ ಸರಿಯಾಗಿಲ್ಲ ಎಂದು ತಿನ್ನದೆ ಹಾಗೇ ಬಿಸಾಡಿದ್ದರು. ನಂತರದಲ್ಲಿ ಅವರಿಗೆ ಕೃಷಿ ವಿಶ್ವ ವಿದ್ಯಾಲಯದ ಒಂದು ಕಡೆ ಉಪಾಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಗುಣಮಟ್ಟದ ಆಹಾರ ನೀಡದ ಕಾರಣ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ ನೀಡಿದ ಉಪಾಹಾರ ಹಸಿ ಬಿಸಿ ಬೆಂದ ಕಾರಣ ತಿನ್ನದೆ ಹಾಗೇ ಬಿಟ್ಟಿದ್ದಾರೆ. ಆಯೋಜಕರು ನೀಡುವ ಆಹಾರ ತಿನ್ನದೆ ಬೇರೆ ಕಡೆ ಹೋಗಿ ತಿನ್ನಲೂ ಅವರಿಗೆ ಸಮಯವೂ ಇಲ್ಲ. ಹಾಗೆಂದ ಮಾತ್ರಕ್ಕೆ ಅವರು ನೀಡಿದ ಆಹಾರ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ಉಪವಾಸ ಇರುವುದೇ ಲೇಸು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಭಾನುವಾರ ಮಧ್ಯಾಹ್ನ ತಕ್ಕಮಟ್ಟಿಗೆ ಉತ್ತಮ ಊಟ ನೀಡಿದ್ದಾರೆ.
ತಡರಾತ್ರಿವರೆಗೂ ಕಾರ್ಯ ನಿರ್ವಹಿಸುವ ಚಾಲಕರ ವಾಹನದಲ್ಲೇ ಮಲಗುವ ಸ್ಥಿತಿ ಎದುರಾಗಿದ್ದಲ್ಲದೆ, ಬೆಳಗ್ಗೆ ಶೌಚ ಹಾಗೂ ಸ್ನಾನಕ್ಕೂ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಇದು ಬರೀ ವಾಹನ ಚಾಲಕರ ಸ್ಥಿತಿ ಮಾತ್ರವಲ್ಲ. ಹಗಲು ರಾತ್ರಿ ಉತ್ಸವಕ್ಕೆ ಬಂದ ಜನರಿಗೆ ಭದ್ರತೆ ನೀಡುವ ಪೊಲೀಸರು ವ್ಯಥೆ ಸಹ ಆಗಿದೆ. ಅವರಿಗೂ ಸರಿಯಾದ ಊಟ ಸಿಗದಂತಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.