ಜಿಲ್ಲೆ

ಊಟ ಸೇವಿಸಿದ ಮಕ್ಕಳಿಗೆ ಹೊಟ್ಟೆ ನೋವು, ವಾಂತಿ

ಶಿರಾ: ನಗರದ ದಿ ಪ್ರೆಸಿಡೆನ್ಸಿ ಪಬ್ಲಿಕ್​ ವಸತಿಶಾಲೆಯಲ್ಲಿರುವ ಮಕ್ಕಳಲ್ಲಿ ಕೆಲವರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡ ಪರಿಣಾಮ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗೆ ದೋಸೆಯನ್ನು ಸೇವಿಸಿದ್ದ ಮಕ್ಕಳು ಮಧ್ಯಾಹ್ನ ಹುರಳಿ ಕಾಳು ಸಾರು, ಅನ್ನ ಊಟ ಮಾಡಿದ್ದರು, ಸಂಜೆ ವೇಳೆಗೆ ಕೆಲವರಲ್ಲಿ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪ್ರೆಸಿಡೆನ್ಸಿ ಶಾಲೆಯ ಚೇರ್ಮನ್​ ಚಿದಾನಂದ ಎಂ. ಗೌಡ ಆಸ್ಪತ್ರೆಗೆ ಧಾವಿಸಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಕೆಲವರಲ್ಲಿ ಈ ರೀತಿ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ, ಪಾಲಕರು ಈ ಬಗ್ಗೆ ಆತಂಕ ಪಡಬೇಡಿ ಎಂದು ಅವರು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್​ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಸುಸ್ತು, ವಾಂತಿ ಇರುವ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ಇಲಾಖೆಯವರು ಈಗಾಗಲೇ ಆಹಾರದ ಮಾದರಿ ಸಂಗ್ರಹ ಮಾಡಿದ್ದಾರೆೆ. ನಮ್ಮ ವೈದ್ಯರ ತಂಡ ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದರು.