ಜಿಲ್ಲೆ

ಊಜಿ ಕಾಟದಿಂದ ಟೊಮ್ಯಾಟೊ ಬೆಳೆ ನಾಶ

ಬೂದಿಕೋಟೆ: ಬಂಡವಾಳ ಹಾಕಿ ಬೆಳೆದ ಟೊಮ್ಯಾಟೊ ಬೆಳೆಗಳಿಗೆ ಊಜಿ ಕಾಟ ಹೆಚ್ಚಾಗಿರುವ ಜತೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ರೈತರು ಬೆಳೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ.

ಬಂಗಾರಪೇಟೆ ತಾಲೂಕಿನಲ್ಲಿ 489.24 ಹೆಕ್ಟೇರ್​ ಪ್ರದೇಶದಲ್ಲಿ ರೈತರು ಟೊಮ್ಯಾಟೊ ಬೆಳೆದಿದ್ದಾರೆ. ಬೆಳೆ ಹಾಗೂ ಫಸಲು ಚೆನ್ನಾಗಿ ಬಂದು ನಾಲ್ಕು ಕಾಸು ಕೈಸೇರಲಿದೆ ಎಂದು ಕನಸು ಕಂಡಿದ್ದ ರೈತನಿಗೆ ಊಜಿ ನೊಣ ಕಾಟದಿಂದ ಬೆಳೆನಾಶವಾದ ಕಾರಣ ಕಂಡ ಕನಸು ನುಚ್ಚು ನೂರಾಗಿದೆ. ಊಜಿ ನೊಣದ ಕಾಟವನ್ನು ನಿಯಂತ್ರಣಕ್ಕೆ ತರಲು ಕೀಟನಾಶಕ ಸಿಂಪಡಣೆ ಮಾಡಿದ ಕೆಲ ರೈತರು ಬೆಳೆ ರಕ್ಷಣೆ ಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬೇಡಿಕೆ ಮತ್ತು ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿ ದಿಕ್ಕು ತೋಚದಂತಾಗಿದೆ.

ಬೂದಿಕೋಟೆ ಹೋಬಳಿಯಲ್ಲಿ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆ ಅವಲಂಬಿತರಾಗಿದ್ದು, ಸುಮಾರು 206 ಹೆಕ್ಟೇರ್​ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊಗೆ ಬೇಡಿಕೆ ಹಾಗೂ ಬೆಲೆ ಇಲ್ಲದ ಕಾರಣ ಕೆಜಿ ಟೊಮ್ಯಾಟೊ 3 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಗೆ ಹಾಕಿದರೆ ಕೂಲಿ ಹಣ ಸಹ ಬರುವುದಿಲ್ಲ ಎಂದು ಟೊಮ್ಯಾಟೊ ಗಿಡದಿಂದ ಕೀಳದೆ ಗಿಡದಲ್ಲೇ ಬಿಟ್ಟಿದ್ದಾರೆ. ಇನ್ನೂ ಕೆಲವರು ಬಂದಷ್ಟು ಬರಲಿ ಎಂದು ಕಟಾವು ಮಾಡಿ ಕೋಲಾರ ಮಾರುಕಟ್ಟೆಗೆ ಹಾಕುತ್ತಿದ್ದರೆ. ಕೆಲವರು ಬೇರೊಂದು ಬೆಳೆ ಹಾಕುವ ಸಲುವಾಗಿ ಟೊಮ್ಯಾಟೊ ಬೆಳೆ ಸಮೇತ ನಾಶ ಮಾಡಲು ಹೊರಟಿದ್ದಾರೆ. ಇದರಿಂದ ಹಾಕಿದ ಬಂಡವಾಳ ಹಿಂಪಡೆಯಲು ಸಾಧ್ಯವಾಗದೆ ರೈತರು ಸಾಲದಲ್ಲಿ ಮುಳುಗುವಂತಾಗಿದೆ.

ಸಾಲ ಮಾಡಿ 2 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿತ್ತು. ಬೆಳೆಗೆ ಊಜಿ ಕಾಟ ಎದುರಾದ ಕಾರಣ ಸಾವಿರಾರು ರೂ. ಖರ್ಚು ಮಾಡಿ ಕೀಟನಾಶಕ ಸಿಂಪಡಣೆ ಮಾಡಿದ್ದೆ. ಆದರೆ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬೆಲೆ ಇಲದೆ ಬೆಳೆ ನಾಶ ಮಾಡಿದ್ದೇನೆ. ಗೋವಿಂದನಾಯಕ, ರೈತ, ತೀತುಬನಹಳ್ಳಿ ತಾಲೂಕಿನಲ್ಲಿ ಈ ಬಾರಿ ರೈತರು ನಿರೀೆಗೂ ಮೀರಿ ಟೊಮ್ಯಾಟೋ ಬೆಳೆದಿದ್ದಾರೆ. ಊಜಿ ನೊಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ರೈತರಿಗೆ ತರಭೇತಿ ನೀಡಲಾಗಿದೆ. ಟೊಮ್ಯಾಟೋ ಇಳುವರಿ ಹೆಚ್ಚಾಗಿದ್ದು, ಅನ್​ಸೀಸನ್​ ಇರುವ ಕಾರಣ ಬೆಲೆ ಇಳಿಮುಖ ಆಗಿದೆ. ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಬಂಗಾರಪೇಟೆ.