ಜಿಲ್ಲೆ

ಉಳ್ಳವರ ಹಿಡಿತದಲ್ಲಿ ಶಿಕ್ಷಣ ಇಲಾಖೆ : ಎಚ್‌ಡಿ ರೇವಣ್ಣ

ಹಾಸನ : ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಉಳ್ಳವರ, ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರಿ ಶಾಲಾ ಕಾಲೇಜುಗಳು ಅನುದಾನ ಇಲ್ಲದೆ ನಲುಗುತ್ತಿವೆ ಎಂದು ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.


ಸಂಸದರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿದ ಅವರು,ಶಿಕ್ಷಣ ಇಲಾಖೆ ಉಳ್ಳವರ ಹಿಡಿತದಲ್ಲಿ ಸಿಲುಕಿ ನಲುಗುತ್ತಿದೆ. ಇಂದು ಶಿಕ್ಷಕರ ದಿನಾಚರಣೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಪರ‌್ಯಾಸ ಎಂದರೆ ಇಂದು ಶಿಕ್ಷಣ ರಾಧಾಕೃಷ್ಣನ್ ಅವರ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.


ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಏಳು ಸಾವಿರ ಶುಲ್ಕ ಇದ್ದರೆ, ಖಾಸಗಿ ಕಾಲೇಜಿನಲ್ಲಿ 90 ಸಾವಿರ ರೂ. ವಸೂಲು ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಯಾವ ರೀತಿಯ ಶಿಕ್ಷಣ ಕೊಡುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಟೀಕಿಸಿದರು.
ನಾವು ಕ್ರಾಂತಿಕಾರಕ ಬದಲಾವಣೆ ಮಾಡಿದ್ದೀವಿ ಎನ್ನುತ್ತಾರೆ. ಆದರೆ ಬಡವರ ಮಕ್ಕಳ ಜೇಬಿಗೆ ಕೈ ಹಾಕಲು ಪ್ಲಾನ್ ಮಾಡಿದ್ದಾರೆ. ಹಾಸನ ಮತ್ತು ಮೊಸಳೆ ಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎರಡೂವರೆ ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಸಾವಿರಾರು ಮಕ್ಕಳು ಡಿಪ್ಲೊಮಾ ಅಧ್ಯಯನ ಮಾಡುತ್ತಿದ್ದಾರೆ. ಇದು ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಐಡಿಯಾಲಾಜಿ ಎನ್ನುವ ಮೂಲಕ ‘ರೇವಣ್ಣ ಅವರ ಹೊಳೆನರಸೀಪುರ ಐಡಿಯಾಲಜಿ ಹಾಸನಕ್ಕೆ ಒಗ್ಗಲ್ಲ’ ಎಂದಿದ್ದ ಶಾಸಕ ಪ್ರೀತಂಗೌಡರ ಹೆಸರು ಹೇಳದೆಯೇ ತಿರುಗೇಟು ನೀಡಿದರು.


ಉಳ್ಳವರ ಜೊತೆ ಸೇರಿ ಸರ್ಕಾರ ಬಡವರ ಮಕ್ಕಳ ಜೇಬಿಗೆ ಕೈ ಹಾಕಿದೆ. ಗುತ್ತಿಗೆದಾರರ ಜೇಬಿಗೆ ಕೈ ಹಾಕಿದ್ದು ಆಯ್ತು, ಈಗ ಬಡವರ ಜೇಬಿಗೆ ಕೈ ಹಾಕಲು ಹೊರಟಿದ್ದಾರೆ. ಶಿಕ್ಷಕರ ಮಕ್ಕಳೂ ತೊಂದರೆಯಲ್ಲಿದ್ದು, ಅವರಿಗೆ ತಾಂತ್ರಿಕ ಶಿಕ್ಷಣದಲ್ಲಿ ಶೇ. 10 ಸೀಟುಗಳನ್ನು ಮೀಸಲಿಡಬೇಕು. ಶಿಕ್ಷಕರ ದಿನಾಚರಣೆಯಂದು ಸರ್ಕಾರ ಈ ಬಗ್ಗೆ ಚಿಂತನೆ ಮಾಡಿದರೆ ಸ್ವಲ್ಪ ಮಟ್ಟಿಗಾದರೂ ಪಾಪ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು.

ಕೆಎಂಶಿ ಸುಳ್ಳು ಹೇಳಲ್ಲ ದತ್ತ ಜೆಡಿಎಸ್ ಬಿಡಲ್ಲ:


ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಣಿಸಿಕೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ‘ಶಿವಲಿಂಗೇಗೌಡರು ಧರ್ಮಸ್ಥಳಕ್ಕೆ ಹೋಗಿ ಬಂದಿದ್ದಾರೆ. ಅವರು ಸುಳ್ಳು ಹೇಳೋದಿಲ್ಲ, ಅವರು ನನ್ನೊಟ್ಟಿಗೆ ಏನು ಮಾತಾಡಿದ್ದಾರೆ ಎಂಬುದನ್ನು ಅವರನ್ನೇ ಕೇಳಿ’ ಎಂದರು.
ಪ್ರಾದೇಶಿಕ ಪಕ್ಷದ ಶಾಸಕರನ್ನು ಸೆಳೆಯುವ ದುಃಸ್ಥಿತಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಬಂದಿದೆ. ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ದೇವೇಗೌಡರನ್ನು ಭೇಟಿಯಾಗಿದ್ದಾರೆ. ದೇವರೇಗೌಡರು ಇರುವವರೆಗೂ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದಿದ್ದಾರೆ. ಈಗಾಗಲೇ ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.