ಜಿಲ್ಲೆ

ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿ ತಂದರು

ಅರಕಲಗೂಡಿನಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಬಡವರೆಡ್ಡಪ್ಪ ರೋಣದ, ದೇವರಾಜು, ಎಸ್.ಬಿ.ಉಳ್ಳಾಗಡ್ಡಿ ಇತರರಿದ್ದರು.

ಅರಕಲಗೂಡು: ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಮಹಾನ್ ಚೇತನ. ಬದಲಾವಣೆ ತಂದ ಮಹಾನ್ ಪುರುಷ ಎಂದು ಶಾಸಕ ಎ. ಮಂಜು ಬಣ್ಣಿಸಿದರು.


ಪಟ್ಟಣದ ಅರಸು ಭವನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭಾನುವಾರ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆ ಸಮರ್ಪಕವಾಗಿ ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದರು. ಹಿಂದುಳಿದ ವರ್ಗದವರ ಕಲ್ಯಾಣಾಭಿವೃದ್ಧಿಗೆ ಅರಸು ಅವರ ಕೊಡುಗೆ ಅಪಾರವಾದುದು. ಹೋಬಳಿ ಮಟ್ಟದಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆದು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವಾದರು. ಅವರು ಅನುಷ್ಠಾನಗೊಳಿಸಿದ ಯೋಜನೆಗಳಿಂದ ಆ ವರ್ಗದಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.


ಅರಸು ಅವರು ಯಾವುದಕ್ಕೂ ಆಸೆಪಟ್ಟವರಲ್ಲ. ನಾನು ಜನ ಸೇವಕ ಎಂಬ ಕಲ್ಪನೆ ಇಟ್ಟುಕೊಂಡು ಹಲವಾರು ಸುಧಾರಣೆಗಳನ್ನು ತಂದರು. ಆದರೆ ಇಂದು ಜಾತೀಯತೆ, ಸ್ವಾರ್ಥ ಹೆಚ್ಚಾಗಿದೆ. ಅದು ಹೋಗಬೇಕು ಎಂದರು.


ನಾನು ದೇವರಾಜ ಅರಸು ಅವರ ಬಗ್ಗೆ ಓದಿ ಈ ಸ್ಥಾನಕ್ಕೆ ಬಂದಿದ್ದೇನೆ. ಹಾಗಾಗಿ ಮಕ್ಕಳು ಯಾವುದರಲ್ಲಿ ಆಸಕ್ತಿ ಇದೆ. ಅದರಲ್ಲಿ ಸಾಧನೆಗೈದವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಮಕ್ಕಳು ಪಠ್ಯದ ಜತೆಗೆ ದೇವರಾಜ ಅರಸು, ಗಾಂಧೀಜಿ, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ಹೆಚ್ಚು ಓದಿ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಡಿ.ಎಸ್.ಬಸವರಾಜಪ್ಪ ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ.ಉಳ್ಳಾಗಡ್ಡಿ, ಬಿಇಒ ದೇವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಪಪಂ ಮುಖ್ಯಾಧಿಕಾರಿ ಬಸವರಾಜಪ್ಪ ಟಾಕಪ್ಪ ಶಿಗ್ಗಾವಿ, ಇತರ ಇಲಾಖೆ ಅಧಿಕಾರಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.