ಬಸವಕಲ್ಯಾಣ: ವಿವಿಧ ಯೋಜನೆಯಡಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮೈಕ್ರೋ ಯೋಜನೆಯಡಿ ಹಾಗೂ ಕಳೆದ ವರ್ಷದ ಅನುದಾನದಲ್ಲಿ ೭೦ ಕೋಟಿ ರೂ. ಉಳಿದಿದೆ. ಅವುಗಳನ್ನು ರಸ್ತೆ, ಕುಡಿಯುವ ನೀರು, ಶಾಲೆಗಳಿಗೆ ಸೇರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅವಶ್ಯ ಕಾಮಗಾರಿಗೆ ಬಳಸಿ ಅಭಿವೃದ್ಧಿ ಕಾರ್ಯ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಎಚ್‌ಕೆಆರ್‌ಡಿಬಿ ಯೋಜನೆಯಡಿ ತಾಲೂಕಿನ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ೨೦ ಶಾಲೆಗಳನ್ನು ಸ್ಮಾರ್ಟ್ ಮಾಡಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಶಾಲೆ, ಅದಕ್ಕೆ ಬೇಕಾಗುವ ಅನುದಾನದ ಬಗ್ಗೆ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೇಳಿದರು.
ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ವಸತಿ ಸಮಸ್ಯೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹಾರಕೂಡ ಹಾಗೂ ಮುಡಬಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ವಸತಿ ನಿಲಯ ನಿರ್ಮಿಸಲಾಗುವುದು. ನಾರಾಯಣಪುರ ರಸ್ತೆ ಮಧ್ಯದ ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಹೋಗಲು ರಸ್ತೆ ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದರು.
ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದು, ಎರಡು ದಿನಗಳಲ್ಲಿ ಕೆಲಸ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.
ಸಹಾಯಕ ಆಯುಕ್ತ ಪ್ರಕಾಶ ಕುದರೆ, ತಾಪಂ ಇಒ ಮಹಾದೇವ ಬಾಬಳಗೆ, ಸಹಾಯಕ ನಿದೇರ್ಶಕ ಅರುಣಕುಮಾರ ಪಾಟೀಲ್, ಸಂತೋಷ, ರಾಜರೆಡ್ಡಿ ಪಾಟೀಲ್ ಇತರರಿದ್ದರು.