ಜಿಲ್ಲೆ

ಉಳಿದ ಸಂತ್ರಸ್ತರಿಗೂ ಉದ್ಯೋಗ ನೀಡಲಿ

ಚಾಮರಾಜನಗರ: ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ 21 ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲು ಕ್ರಮವಹಿಸಿದ್ದು, ಉಳಿದ ಸಂತ್ರಸ್ತರಿಗೂ ಉದ್ಯೋಗವನ್ನು ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ 2021 ಮೇ.2 ರ ಕೋವಿಡ್-19 ಸಂದರ್ಭದಲ್ಲಿ ಆಕ್ಸಿಜನ್ ಸಿಗದೇ 36 ಜನರು ಮೃತಪಟ್ಟಿದ್ದರು. ಈ ಸಂಬಂಧ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ನೀಡುವಂತೆ ಸುಮಾರು 4 ವರ್ಷಗಳಿಂದಲೂ ಆಕ್ಸಿಜನ್ ಸಂತ್ರಸ್ತರು, ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳು ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದವು. ಇತ್ತೀಚೆಗೆ ವಿವಿಧ ಸಂಘ-ಸಂಸ್ಥೆಗಳು ಒಂದಾಗಿ ಚಾಮರಾಜನಗರ ಬಂದ್ ಮಾಡುವಂತೆ ನಿರ್ಧಾರ ಕೈಗೊಂಡಿದ್ದರು. ಜನಪ್ರತಿನಿಧಿಗಳು ಸಂತ್ರಸ್ತರು ಹಾಗೂ ಹೋರಾಟಗಾರರ ಮನವೊಲಿಸಿ ಹೋರಾಟವನ್ನು ಹಿಂಪಡೆಯುವಂತೆ ಮನವಿ ಮಾಡಿ, ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದರು.

ಅದರಂತೆ ಸೆ.6 ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 32 ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಮೊದಲ ಹಂತದಲ್ಲಿ 21 ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸಂತ್ರಸ್ತರಿಗೆ ಉದ್ಯೋಗ ನೀಡಬೇಕು, ಉಳಿದ 15 ಸಂತ್ರಸ್ತರಿಗೂ ಉದ್ಯೋಗ ನೀಡಲು ಅಗತ್ಯ ಕ್ರಮವಹಿಸಬೇಕು ಎಂದು ಸಂತ್ರಸ್ತರು ಹಾಗೂ ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ವಾರದ ಲೌಡಸ್ಪೀಕರ್‌ನಲ್ಲಿ ಆಕ್ಸಿಜನ್ ಸಂತ್ರಸ್ತರು ಮತ್ತು ಹೋರಾಟಗಾರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

*ಉದ್ಯೋಗ ನೀಡುವುದು ವಿಳಂಬವಾಗಬಾರದು

ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಿರುವುದನ್ನು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಷ್ಟಪಡಿಸಬೇಕು. 21 ಜನರನ್ನು ಹೊರತುಪಡಿಸಿ ಉಳಿದವರಿಗೂ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಗೆಜೆಟ್ ನೋಟಿಪಿಕೇಶನ್ ಹೊರಡಿಸುವುದು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಸಂತ್ರಸ್ತರಲ್ಲಿ ಹೆಚ್ಚು ಮಹಿಳೆಯರೇ ಇರುವುದರಿಂದ ಚಾಮರಾಜನಗರದ ವ್ಯಾಪ್ತಿಯಲ್ಲೇ ಅವರಿಗೆ ಉದ್ಯೋಗವನ್ನು ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು.

ಹಳ್ಳಿಕೆರೆಹುಂಡಿ ಭಾಗ್ಯರಾಜ್, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಚಾಮರಾಜನಗರ

*ಯಾವುದೇ ಆದೇಶ ಬಂದಿಲ್ಲ

ಆಕ್ಸಿಜನ್ ಸಂತ್ರಸ್ತರಲ್ಲಿ 21 ಜನರಿಗೆ ಸರ್ಕಾರಿ ಉದ್ಯೋಗ ನೀಡಿರುವ ಕುರಿತು ಮಾಹಿತಿ ತಿಳಿದಿದ್ದು, ಯಾವುದೇ ವಿಧವಾದ ಆದೇಶ ಬಂದಿಲ್ಲ. ಈ ಕುರಿತು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಸರ್ಕಾರದ ಯಾವುದಾದರೂ ಕಾಮಗಾರಿಯಾಗಿದ್ದರೇ ಮೊದಲ ಹಂತ ಮತ್ತು ಎರಡನೇ ಹಂತ ಎಂದು ಮಾಡಿಕೊಳ್ಳಬಹುದಿತ್ತು. ಆದರೆ ಉದ್ಯೋಗ ನೀಡುವುದರಲ್ಲಿ ಮೊದಲ ಹಂತ, ಎರಡನೇ ಹಂತ ಎಂದು ಯಾವ ಮಾನದಂಡದ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದ್ದಾರೆ. ತಿಳಿಯುತ್ತಿಲ್ಲ. ಆಗಾಗಿ 36 ಸಂತ್ರಸ್ತರಿಗೂ ಸರ್ಕಾರಿ ಉದ್ಯೋಗ ನೀಡಬೇಕು.

ಅಬ್ರಾರ್ ಅಹಮ್ಮದ್, ಸದಸ್ಯ, ನಗರಸಭೆ, ಚಾಮರಾಜನಗರ

*ತಾರತಮ್ಯ ಮಾಡುವುದು ಬೇಡ

ಆಕ್ಸಿಜನ್ ಸಂತ್ರಸ್ತರಲ್ಲಿ ಯಾವ 21 ಜನರಿಗೆ ಉದ್ಯೋಗ ನೀಡಲಾಗಿದೆ ಎಂಬುದನ್ನು ತಿಳಿಸಬೇಕು. ಬಹುಮುಖ್ಯವಾಗಿ ಎಲ್ಲರೂ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದು, 36 ಸಂತ್ರಸ್ತರಿಗೂ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಸುಮಾರು 4 ವರ್ಷಗಳಿಂದಲೂ ಎಲ್ಲರೂ ಹೋರಾಟ ಮಾಡಿಕೊಂಡು ಬರುತ್ತಿದ್ದು, 36 ಸಂತ್ರಸ್ತರಿಗೂ ಉದ್ಯೋಗ ನೀಡಬೇಕು. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದಂತೆ ಈಗಲೂ ಮಾಡಬಾರದು.

ಸವಿತಾ, ಸಂತ್ರಸ್ತೆ, ಲಕ್ಕೂರು, ಚಾಮರಾಜನಗರ

*ಎಲ್ಲರೂ ಸಂಕಷ್ಟದಲ್ಲಿ ಇದ್ದೇವೆ

ಸುಮಾರು 4 ವರ್ಷಗಳಿಂದಲೂ 36 ಸಂತ್ರಸ್ತರೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. 21 ಸಂತ್ರಸ್ತರಿಗೆ ಯಾವ ಆಧಾರದ ಮೇಲೆ ಉದ್ಯೋಗವನ್ನು ನೀಡಿದರೂ ಅದರಂತೆ ಉಳಿದವರಿಗೂ ಉದ್ಯೋಗವನ್ನು ನೀಡಬೇಕು. ಈ ಮೂಲಕ ಎಲ್ಲಾ ಸಂತ್ರಸ್ತರಿಗೂ ನ್ಯಾಯವನ್ನು ಕೊಡಿಸಿಕೊಡಬೇಕು. ಎಲ್ಲಾ ಸಂತ್ರಸ್ತ ಕುಟುಂಬಗಳು ಸಂಕಷ್ಟದಲ್ಲಿ ಇರುವುದನ್ನು ಮನಗಾಣಬೇಕು.

ಎಂ.ನಾಗರತ್ನ, ಸಂತ್ರಸ್ತೆ, ಚಾಮರಾಜನಗರ

*ಕಾಲಹರಣ ಮಾಡುವುದು ಬೇಡ

ಆಕ್ಸಿಜನ್ ದುರಂತರದಲ್ಲಿ ಮೃತಪಟ್ಟವರ 36 ಸಂತ್ರಸ್ತರಲ್ಲಿ 21 ಜನರಿಗೆ ಸರ್ಕಾರಿ ಉದ್ಯೋಗ ನೀಡಿರುವುದು ಸ್ವಾಗತಾರ್ಹ. ಅದರಂತೆ ಉಳಿದವರಿಗೆ ಯಾವುದೇ ರೀತಿಯಲ್ಲೂ ಕಾಲಹರಣ ಮಾಡದೇ ಆದಷ್ಟು ಬೇಗ ಉದ್ಯೋಗವನ್ನು ಕೊಡುವ ಕೆಲಸ ಮಾಡಬೇಕು. ಈಗಾಗಲೇ ಸಂತ್ರಸ್ತ ಕುಟುಂಬದವರು ಸಾಕಷ್ಟು ನೊಂದಿದ್ದಾರೆ. ಇದು ಸಂತ್ರಸ್ತರು, ಹೋರಾಟಗಾರರ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ವಿಚಾರದಲ್ಲಿ ಜಿಲ್ಲಾ ಉಸ್ತವಾರಿ ಸಚಿವರಿಗೆ ಹಾಗೂ ಮುಖ್ಯವಾಗಿ ವಿಶೇಷ ಕಾಳಜಿ ವಹಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ.

ನಿಜಧ್ವನಿ ಗೋವಿಂದರಾಜು, ಹಿರಿಯ ಹೋರಾಟಗಾರ, ಚಾಮರಾಜನಗರ

*ತನಿಖಾ ವರದಿಯನ್ನು ಶೀಘ್ರ ನೀಡಲಿ

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಆಕ್ಸಿಜನ್ ದುರಂತರದಲ್ಲಿ ಮೃತಪಟ್ಟವರ 21 ಸಂತ್ರಸ್ತರಿಗೆ ಉದ್ಯೋಗ ನೀಡಲು ಮುಂದಾಗಿದೆ. ಅದರಂತೆ ಉಳಿದವರಿಗೂ ಅವರ ವಿದ್ಯಾರ್ಹತೆ ಅನುಸಾರವಾಗಿ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಸರ್ಕಾರ ರಚನೆ ಮಾಡಿರುವ ನಿವೃತ್ತ ನ್ಯಾ.ಖುನ್ಹಾ ನೇತೃತ್ವದ ತನಿಖಾ ಆಯೋಗ ಶೀಘ್ರವಾಗಿ ತನಿಖೆ ನಡೆಸಿ ವರದಿ ನೀಡಬೇಕು. ಜಿಲ್ಲಾ ಕೇಂದ್ರದಲ್ಲೇ ಆಯೋಗದ ಕಚೇರಿ ತೆರೆಯಬೇಕು. ದುರಂತಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಅಗತ್ಯಕ್ರಮವಾಗಬೇಕು. ಈಗ 21 ಜನರಿಗೆ ಕೆಲಸ ದೊರೆಯಲು ಕಾರಣವಾದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಸಿ.ಎಂ.ಕೃಷ್ಣಮೂರ್ತಿ, ಪ್ರಗತಿಪರ ಹೋರಾಟಗಾರ, ಚಾಮರಾಜನಗರ

*ತಪ್ಪಿತಸ್ತರಿಗೂ ಶಿಕ್ಷೆಯಾಗಲಿ

ಆಕ್ಸಿಜನ್ ದುರಂತದಲ್ಲಿ 36 ಜನರು ಮೃತಪಟ್ಟಿದ್ದು, ಅಷ್ಟೂ ಕುಟುಂಬಗಳು ಇಷ್ಟು ವರ್ಷಗಳ ಕಾಲವೂ ಅಪಾರವಾದ ಸಂಕಷ್ಟ ಅನುಭವಿಸಿದೆ. ಇತ್ತೀಚೆಗೆ ಸಚಿವ ಸಂಪುಟದಲ್ಲಿ 21 ಸಂತ್ರಸ್ತರಿಗೆ ಉದ್ಯೋಗ ನೀಡುವಂತೆ ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಉಳಿದ ಸಂತ್ರಸ್ತರಿಗೂ ಅಗತ್ಯವಾಗಿ ಉದ್ಯೋಗವನ್ನು ನೀಡಬೇಕು. ಈ ದುರಂತದಲ್ಲಿ ತಪ್ಪು ಮಾಡಿದವರಿಗೂ ಶೀಘ್ರವಾಗಿ ಶಿಕ್ಷೆಯಾಗಬೇಕು.

ಮಹೇಶ್‌ದೊಡ್ಡರಾಯಪೇಟೆ, ಹೋರಾಟಗಾರ, ಚಾಮರಾಜನಗರ