ಕಾರವಾರ: ಜೊಯಿಡಾ ತಾಲೂಕಿನ ಉಳವಿಯಲ್ಲಿ ಫೆ. 7 ರಿಂದ 18 ರವರೆಗೆ ನಡೆಯಲಿರುವ ಚನ್ನಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು 18 ವರ್ಷಗಳ ಕೆಳಗಿನವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೊಡ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು 2 ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಭಕ್ತಾದಿಗಳು ಚಕ್ಕಡಿ ಮತ್ತು ಟ್ರ್ಯಾಕ್ಟರ್ಗಳಲ್ಲಿ ಬರಲು ಹಾಗೂ ಉಳವಿಯಲ್ಲಿ ರಾತ್ರಿ ತಂಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಪಾಲ್ಗೊಳ್ಳವ ಭಕ್ತಾದಿಗಳಿಂದ ಏರ್ಪಡಿಸುವ ದಾಸೋಹ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ, ಕೋವಿಡ್ ರೋಗ ಲಕ್ಷಣ ಹೊಂದಿರುವವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತಾದಿಗಳು ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದ ಕೂಡಲೇ ತಮ್ಮ ಊರುಗಳಿಗೆ ಹಿಂದಿರುಗಬೇಕು ಎಂದು ತಿಳಿಸಿದ್ದಾರೆ. ಪ್ರಸ್ತುತ ದೇವಸ್ಥಾನದ ಆವರಣದಲ್ಲಿ ಇರುವ ಅಂಗಡಿ ಮುಂಗ್ಗಟ್ಟುಗಳನ್ನು ಹೊರತುಪಡಿಸಿ ಹೊರಗಿನಿಂದ ಆಗಮಿಸಿ ಯಾವುದೇ ಮಳಿಗೆ ಮತ್ತು ಅಂಗಡಿಗಳನ್ನು ತೆರೆಯಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಜಿಲ್ಲಾಡಳಿತವು ಬದ್ದವಾಗಿರುತ್ತದೆ. ಈ ದಿಶೆಯಲ್ಲಿ ತೆಗೆದುಕೊಂಡ ಪ್ರಯತ್ನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಈ ಮೂಲಕ ವಿನಂತಿಸಿದ್ದಾರೆ.