ಕಳಸ: ತಾಲೂಕಿನಾದ್ಯಂತ ಶನಿವಾರದ ರಾತ್ರಿ ಭಾರಿ ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳಸ-ಬಾಳೆಹೊನ್ನೂರು ಮಧ್ಯದ ಹಳುವಳ್ಳಿಯಲ್ಲಿ ಮರ ಮತ್ತು ಬಂಡೆಗಳು ರಸ್ತೆ ಬಿದ್ದಿದ್ದರಿಂದ ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕಳಸ ಎಡದಾಳು ಬಾಬು ಎಂಬುವವರ ಮನೆಗೆ ಅಡಕೆ ಮರ ಬಿದ್ದು ಮನೆಗೆ ಹಾನಿಯಾಗಿತ್ತು. ಇಡಕಣಿ ಗ್ರಾಪಂ ಮಳಲ್‌ಕೇರಿ ಜಾನಮ್ಮ ಎಂಬುವವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮಾವಿನಕೆರೆ ಗ್ರಾಮದ ಮುಮ್ಮಗೆ ಚಂದ್ರು ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಸಂಸೆ ಎಡಮುರೇಶ್ವರ ದೇವಸ್ಥಾನದ ಮೇಲೆ ವಿದ್ಯುತ್ ಕಂಬ ಬಿದ್ದು ಛಾವಣಿಗೆ ಹಾನಿಯಾಗಿದೆ. ಹಳುವಳ್ಳಿ ಚಿಕ್ಕಡ್ಲು ಎಂಬಲ್ಲಿ ರಸ್ತೆಗೆ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಹಿರೇಬೈಲು-ಗಬ್ಗಲ್ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಅಡಕೆ ತೋಟಗಳಲ್ಲಿ ನೂರಾರು ಅಡಕೆ ಮರಗಳು ಬುಡಮೇಲಾಗಿವೆ. ಭಾನುವಾರ ಮಳೆ ಕ್ಷೀಣಿಸಿದ್ದು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೂರು ದಿನಗಳಿಂದ ವಿದ್ಯುತ್ ಸಂಚಾರ ಸ್ಥಗಿತಗೊಂಡಿದ್ದು, ಕುಡಿಯುವ ನೀರಿಗೂ ಪರದಾಡಬೇಕಾಗಿದೆ. ಹಲವಾರು ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿದೆ.