ಚಿತ್ರದುರ್ಗ: ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ…
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಆರನೇ ದಿನವಾದ ಮಂಗಳವಾರ ಕಾತ್ಯಾಯನೀ ದೇವಿಯ ಆರಾಧನೆಯ ವೇಳೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಮೊಳಗಿದ ಮಂತ್ರವಿದು. ಅಲ್ಲದೆ, ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಾರ್ಥನೆಗಳು ನೆರವೇರಿದವು.
ಹಲವು ದೇಗುಲಗಳಿಗೆ ಬೆಳಗ್ಗೆ 5ರಿಂದ ರಾತ್ರಿ 9ರ ವರೆಗೂ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ದೇವಿಯ ಅಲಂಕಾರ ಕಣ್ತುಂಬಿಕೊಂಡರು. ದೇವಿ ಪುರಾಣ ಪಾರಾಯಣ, ಮಹಿಷಾಸುರ ಮರ್ದಿನಿ ಮಂತ್ರ ಪಠಣ, ಭಜನೆ ಸೇರಿ ದೇವಿಗೆ ಶ್ರದ್ಧಾ-ಭಕ್ತಿ ಸಮರ್ಪಿಸಿದರು.
ಬರಗೇರಮ್ಮ ದೇವಿಗೆ ವಿವಿಧ ಹಣ್ಣುಗಳಿಂದ, ಉಚ್ಚಂಗಿ ಯಲ್ಲಮ್ಮ ದೇವಿಗೆ ಸಾವಿರಾರು ನಿಂಬೆ ಹಣ್ಣುಗಳಿಂದ, ಏಕನಾಥೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆ ಮಾರಮ್ಮ, ಇಂಗಳದಾಳ್ ಮಾರಿಕಾಂಬ ದೇವಿಗೆ ಪುಷ್ಪಾಲಂಕಾರ ಸೇವೆ ಜರುಗಿತು.
ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಬೊಗಳೇರಹಟ್ಟಿ ದುರ್ಗಾಂಬಿಕಾ, ತಾಲೂಕಿನ ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಗೆ ಕಾತ್ಯಾಯನೀ, ದೊಡ್ಡಸಿದ್ಧವ್ವನಹಳ್ಳಿಯ ಕಾಳಿಕಾ ದೇವಿಯನ್ನು ದುರ್ಗಿ ಅವತಾರದ ಮಾದರಿಯಲ್ಲಿ ಅಲಂಕರಿಸಲಾಗಿತ್ತು.
ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ಕಾಳಿಕಮಠೇಶ್ವರಿ, ಚಾಮುಂಡೇಶ್ವರಿ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ಜರುಗಿದವು.
ತಾಲೂಕಿನ ಲಕ್ಷ್ಮೀಸಾಗರ ಗೇಟ್ ಸಮೀಪದ ತುಳಜಾ ಭವಾನಿ, ಕೆಳಗೋಟೆಯ ಮರಾಠ ವಿದ್ಯಾವರ್ಧಕ ಸಂಘದ ಅಂಬಾ ಭವಾನಿ ದೇಗುಲದಲ್ಲೂ ದೇವಿ ಮೂರ್ತಿಗೆ ವಿಶೇಷಾಲಂಕಾರ ನಡೆದವು. ಹಲವೆಡೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ಜಗನ್ಮಾತೆಯಾದ ತಾಯಿ ಕಾತ್ಯಾಯನೀಯೂ ಸದ್ಭಕ್ತರ ಹರಕೆಗಳನ್ನು ಈಡೇರಿಸಿ, ಸಕಲರಿಗೂ ಆರೋಗ್ಯ, ನೆಮ್ಮದಿ, ಸೌಖ್ಯ, ಶ್ರೇಯೋಭಿವೃದ್ಧಿ ಕರುಣಿಸಲೆಂಬ ಪ್ರಾರ್ಥನೆಯೊಂದಿಗೆ ಭಕ್ತಿಪೂರ್ವಕ ಆರಾಧನೆ ಜರುಗಿತು.