ಹುಬ್ಬಳ್ಳಿ: ಲಾಕ್ಡೌನ್ನಿಂದಾಗಿ ರಾಜ್ಯದ ವಿವಿಧೆಡೆ ಸಿಲುಕಿದ್ದ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ವಲಸೆ ಕಾರ್ವಿುಕರು ನಗರದ ರೈಲ್ವೆ ನಿಲ್ದಾಣದಿಂದ ಬುಧವಾರ 2 ಶ್ರಮಿಕ ಸ್ಪೆಷಲ್ ಎಕ್ಸ್ಪ್ರೆಸ್ ರೈಲುಗಳ ಮೂಲಕ ತವರು ರಾಜ್ಯಕ್ಕೆ ತೆರಳಿದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶದ ಲಖನೌಗೆ 1,513 ಜನ ಹಾಗೂ ಬಿಹಾರದ ದರ್ಬಾಂಗ್ಗೆ 1,596 ಜನ ಸೇರಿ ಒಟ್ಟು 3,109 ವಲಸೆ ಕಾರ್ವಿುಕರು ತವರು ರಾಜ್ಯಗಳತ್ತ ಪ್ರಯಾಣ ಬೆಳೆಸಿದರು.
ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಬೀದರ್, ರಾಯಚೂರ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಿಲುಕಿದ್ದ ಎರಡೂ ರಾಜ್ಯಗಳ ವಲಸೆ ಕಾರ್ವಿುಕರನ್ನು ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು. ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ, ರೈಲ್ವೆ ಟಿಕೆಟ್ ನೀಡಲಾಯಿತು. ಪ್ರಯಾಣಿಕರಿಗೆ ಜಿಲ್ಲಾಡಳತದಿಂದ ಊಟದ ಪ್ಯಾಕೆಟ್, ಕುಡಿಯುವ ನೀರು ವಿತರಿಸಲಾಯಿತು. ನಿಲ್ದಾಣದಲ್ಲಿದ್ದ ರೈಲ್ವೆ, ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ವಲಸೆ ಕಾರ್ವಿುಕರನ್ನು ಬೀಳ್ಕೊಟ್ಟರು.
ಲಾಕ್ಡೌನ್ನಿಂದಾಗಿ ತೀವ್ರ ತೊಂದರೆ
2 ವರ್ಷಗಳಿಗೊಮ್ಮೆ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಕುಟುಂಬ ಸಮೇತರಾಗಿ ಬಂದು ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಿ, ಕೈತುಂಬ ಹಣ ಮಾಡಿಕೊಂಡು ಹೋಗುತ್ತಿದ್ದ ಬಿಹಾರ ಮೂಲದ ಕುಟುಂಬಕ್ಕೆ ಈ ಬಾರಿ ಕರೊನಾ ಆಘಾತ ನೀಡಿದೆ.
ಜಾತ್ರೆ ಪ್ರಾರಂಭಗೊಳ್ಳುವ 15 ದಿನ ಮುಂಚೆಯೇ ಶಿರಸಿಗೆ ಆಗಮಿಸಿದ್ದ ಬಿಹಾರದ ದರ್ಬಾಂಗ್ ಜಿಲ್ಲೆಯ ಬಿಜುಲಿ ಗ್ರಾಮದ ಮೊಹಮ್ಮದ್ ಗೌಸ್ ಮತ್ತವರ ಕುಟುಂಬ ಲಾಕ್ಡೌನ್ನಿಂದಾಗಿ ತೀವ್ರ ತೊಂದರೆ ಅನುಭವಿಸಿತ್ತು.
ಲಾಕ್ಡೌನ್ ಮುಂಚೆ ಗಳಿಸಿದ್ದ ಹಣದಿಂದ ಕೆಲ ದಿನ ದಿನಸಿ ಖರೀದಿಸಿ, ಜೀವನ ನಡೆಸಿದೆವು. ನಂತರ ಕೈಯಲ್ಲಿದ್ದ ಹಣ ಖಾಲಿಯಾಯಿತು. ಹೊತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ಉದ್ಭವಿಸಿತ್ತು. ಕೆಲ ಸಂಘಟನೆಗಳು ಹಾಗೂ ಸ್ಥಳೀಯ ಆಡಳಿತದಿಂದ ಲಾಕ್ಡೌನ್ ಅವಧಿಯಲ್ಲಿ ಹೊಟ್ಟೆ ತುಂಬಿತು. ಇದೀಗ ಶ್ರಮಿಕ ಎಕ್ಸ್ಪ್ರೆಸ್ ರೈಲಿನ ಮೂಲಕ ತವರೂರಿನತ್ತ ಪ್ರಯಾಣ ಬೆಳೆಸಿದ್ದು, 2 ವರ್ಷಗಳ ನಂತರ ಮತ್ತೆ ಬರುತ್ತೇವೆ ಎಂದು ಮೊಹಮ್ಮದ ಗೌಸ್ ‘ವಿಜಯವಾಣಿ’ಗೆ ತಿಳಿಸಿದರು.