ಮೂಡಲಗಿಯಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿ.ಬಿ.ಹಂದಿಗುಂದ, ರಾಮಣ್ಣ ಹಂದಿಗುಂದ, ಕಸ್ತೂರಿ, ಮಲ್ಲಿಕಾರ್ಜುನ ಚೌಕಾಶಿ ಇತರರಿದ್ದರು. 
ಜಿಲ್ಲೆ

ಉಪ್ಪಾರ ಸಮುದಾಯಕ್ಕೆ ಎಸ್ಸಿ,ಎಸ್ಟಿ ಮೀಸಲಾತಿ ಕಲ್ಪಿಸಿ

Belagavi

ಮೂಡಲಗಿ, ಬೆಳಗಾವಿ: ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಉಪ್ಪಾರ ಸಮುದಾಯಕ್ಕೆ ಮೀಸಲಾತಿ ಘೋಷಿಸಿ ಎಂದು ಉಪ್ಪಾರ ಸಮುದಾಯದ ಮುಖಂಡ ಬಿ.ಬಿ.ಹಂದಿಗುಂದ ಆಗ್ರಹಿಸಿದರು.

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಪಟ್ಟಣದ ಈರಣ್ಣ ದೇವಸ್ಥಾನದಿಂದ ಕಲ್ಮೇಶ್ವರ ವೃತ್ತದವರಿಗೆ ಮೂಡಲಗಿ ತಾಲೂಕು ಉಪ್ಪಾರ ಸಮಾಜ ಮತ್ತು ಮಹರ್ಷಿ ಭಗೀರಥ ಉಪ್ಪಾರ ಸಮುದಾಯದ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪ್ಪಾರ ಸಮುದಾಯಕ್ಕೆ ಎಸ್.ಸಿ/ಎಸ್.ಟಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದರು ಆಗ್ರಹಿಸಿದರು.

ನ್ಯಾಯವಾದಿ ಎಸ್.ಎಂ.ಹತ್ತಿಕಟ್ಟಗಿ ಮಾತನಾಡಿ, ಉಪ್ಪಾರ ಸಮುದಾಯವು ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅತಿ ಹಿಂದುಳಿದ ಜಾತಿಯಾಗಿರುತ್ತದೆ. ಉಪ್ಪಾರ ಸಮುದಾಯವನ್ನು ಹಲವು ದಶಕಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೃಹತ್ ಸಮಾವೇಶ ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪ್ಪಾರ ಸಮುದಾಯದ ತಾಲೂಕು ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ ಮಾತನಾಡಿ, ಉಪ್ಪಾರ ಸಮಾಜದ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.

ಅರ್ಜುನ ನಾಯಿಕವಾಡಿ, ಪರಸಪ್ಪ ಬಬಲಿ, ಶಿವಪುತ್ರಪ್ಪ ಜಕ್ಕಬಾಳ, ಶಿವಬಸು ಹಂದಿಗುಂದ, ಸದಾಶಿವ ಗುದುಗಗೋಳ, ಕಸ್ತೂರಿ ಹೆಗ್ಗಾಣಿ ಮಾತನಾಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಮೂಡಲಗಿ ತಹಸೀಲ್ದಾರ್ ಮಾತನಾಡಿ, ತಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.

ಈಶ್ವರ ಕಂಕಣವಾಡಿ, ಬಸವರಾಜ ಖಾನಪ್ಪನವರ, ಸುಭಾಸ ಪೂಜೇರಿ, ಅಪ್ಪಯ್ಯ ಬಡ್ನಿಗೋಳ, ಶಂಕರ ಬೀಲಕುಂದಿ, ವಿಠ್ಠಲ ಸವದತ್ತಿ, ವಿಷ್ಣು ಲಾತೂರ, ಮುತ್ತೆಪ್ಪ ಕುಳ್ಳೂರ, ಚಂದ್ರು ಬೆಳಗಲಿ, ಶಿವಪ್ಪ ಅಟಮಟ್ಟಿ, ಶ್ರೀಶೈಲ ಪೂಜೇರಿ, ಗುರುನಾಥ ಗಂಗಣ್ಣವರ, ಹನುಮಂತ ಕಂಕಣವಾಡಿ, ಸಾಬಪ್ಪ ಬಂಡ್ರೋಳಿ, ಮಹಾದೇವ ಕಂಕಣವಾಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಮರ್ದಿ, ವಿಠ್ಠಲ ಗುಡೆನ್ನವರ, ಮಲ್ಲಿಕಾರ್ಜುನ ಚೌಕಾಶಿ, ಅಶೋಕ, ಕಸ್ತೂರಿ, ಅಡಿವೆಪ್ಪ ಕಿತ್ತೂರ, ಹನುಮಂತ ಪೂಜೇರಿ, ಸಿದ್ದಪ್ಪ ಹಮನ್ನವರ, ಬಸವರಾಜ ಆಯಟ್ಟಿ, ಮಹಾದೇವ ಮಲಗೌಡರ, ಶಂಭುಲಿಂಗ ಮುಕ್ಕನವರ, ಸುಭಾಸ ಗೊಡ್ಯಾಗೋಳ, ರಮೇಶ ಉಪ್ಪಾರ ಇತರರು ಇದ್ದರು.