ಯಳಂದೂರು: ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಯರಿಯೂರು ಎಸ್. ರೇಚಣ್ಣ ಕರೆ ನೀಡಿದರು.
ಪಟ್ಟಣದ ಬಳೆಪೇಟೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ 620 ಅಂಕ ಗಳಿಸುವ ಮೂಲಕ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶಾತಿ ಪಡೆದ ವಿದ್ಯಾರ್ಥಿ ಸುರೇಂದ್ರನನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರು ಅತೀ ವಿರಳ. ಇಂತಹ ಕೆಲವೇ ವಿದ್ಯಾರ್ಥಿಗಳಲ್ಲಿ ಸುರೇಂದ್ರರ ಸಾಧನೆ ಮೆಚ್ಚುವಂತಹದ್ದಾಗಿದೆ. ಸಮುದಾಯದಲ್ಲಿ ಶಿಕ್ಷಣ ಪಡೆಯಲು ಇಂತಹ ವಿದ್ಯಾರ್ಥಿ ಇತರರರಿಗೆ ಮಾದರಿಯಾಗಿದ್ದಾನೆ. ಇಂತಹ ಪ್ರತಿಭೆಗಳು ಇನ್ನಷ್ಟು ಹೆಚ್ಚಬೇಕು. ಪೋಷಕರು ಸಹ ಓದುವ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ನೌಕರರ ಸಂಘದ ಗೌರವಾಧ್ಯಕ್ಷ ಪಿ. ಗೋವಿಂದರಾಜು, ಪುಟ್ಟಸ್ವಾಮಿ, ವೈ.ಸಿ. ಮಹದೇವಸ್ವಾಮಿ, ಬಿಆರ್‌ಪಿ ದುಗ್ಗಹಟ್ಟಿ ಮಂಜುನಾಥ, ಗೌಡಹಳ್ಳಿ ಮಹೇಶ್, ಕೆಸ್ತೂರು ಗುರುರಾಜು, ರಾಜು, ಗಿರೀಶ್, ಬಳೆಪೇಟೆ ರೇವಣ್ಣ ಸೇರಿದಂತೆ ಅನೇಕರು ಇದ್ದರು.