ಜಿಲ್ಲೆ

ಉಪೇಂದ್ರರ ಕೊಳಕು ಮನಸ್ಥಿತಿ ತೋರುತ್ತದೆ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ

ಮೈಸೂರು: ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ನಟ ಉಪೇಂದ್ರ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ತೋರಿತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೋಷಿತ ಸಮುದಾಯವನ್ನು ಇಂತಹ ಹೇಳಿಕೆಯಿಂದ ಮತ್ತೆ ಮತ್ತೆ ನೋಯಿಸಲಾಗುತ್ತಿದೆ. ಉಪೇಂದ್ರ ಹೇಳಿಕೆಯಿಂದ ಇಡೀ ಶೋಷಿತ ಸಮಾಜಕ್ಕೆ ನೋವಾಗಿದೆ. ಈಗಾಗಲೇ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.
ಏಳು ತಿಂಗಳಿನಲ್ಲಿ ರಾಜ್ಯ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ಆನೆ ಹೋಗುತ್ತಿರುತ್ತದೆ, ನರಿ ಅದೇನೋ ಬೀಳುತ್ತದೆ ಎಂದು ಕಾಯುತ್ತಿರುತ್ತದೆ. ಬಿಜೆಪಿಯವರ ಪಾಡು ಈ ರೀತಿಯೇ ಆಗಿದೆ ಎಂದು ಲೇವಡಿ ಮಾಡಿದರು.
ಗ್ಯಾರಂಟಿಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿರುವುದನ್ನು ಸಹಿಸದೆ ಅದನ್ನು ಕೆಡಿಸಲು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಪರೇಷನ್ ಕಮಲ ಯಾವುದೂ ಕರ್ನಾಟಕದಲ್ಲಿ ನಡೆಯುವುದಿಲ್ಲ. ಬಿಜೆಪಿಯವರು ಅಂತಹ ಅಪರೇಷನ್ ನಡೆಸಿದ್ದಕ್ಕೇ ಅವರಿಗೆ ಇಂದು ಈ ದುಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿಯ ಯಾವ ಆಟವೂ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಎಂದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ, ಬಿಜೆಪಿ, ಜೆಡಿಎಸ್‌ನಿಂದ ಹಲವರು ಕಾಂಗ್ರೆಸ್ ಕಡೆಗೆ ಬರಲು ತಯಾರಿದ್ದಾರೆ. ನಾವೇನೂ ಯಾರನ್ನೂ ಕರೆಯುತ್ತಿಲ್ಲ. ಅವರಾಗಿಯೇ ನಮ್ಮ ಕಡೆ ಬರುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಹೇಗೆ ಅಸ್ಥಿರವಾಗುತ್ತದೆ ಎಂದು ಪ್ರಶ್ನಿಸಿದರು.
ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಬಿಜೆಪಿ, ಜೆಡಿಎಸ್‌ನವರು ಹೊರಟಿದ್ದಾರೆ. ರಾಜ್ಯ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೇಗಾದರೂ ಸರಿ ಈ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.