ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಮುಳುಗಡೆ ಸಂತ್ರಸ್ತರು ಹಮ್ಮಿಕೊಂಡಿರು ಆಹೋ ರಾತ್ರಿ ಧರಣಿ ಸತ್ಯಾಗ್ರಹದ ಏಳನೇ ದಿನವಾದ ಸೋಮವಾರ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. 
ಜಿಲ್ಲೆ

ಉಪವಾಸಕ್ಕೂ ಸೈ, ಬಡಿಗೆ ಹಿಡಿದು ಹೋರಾಡಲು ಜೈ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ-೩ಕ್ಕೆ ಆಗುತ್ತಿರುವ ವಿಳಂಬ ನೀತಿ ಖಂಡಿಸಿ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದ ಕಾವು ತೀವ್ರಗೊಂಡಿದೆ.

ಸೋಮವಾರ ಧರಣಿಗೆ ವಿವಿಧ ಸಂಘಟನೆಗಳ ಜೊತೆಗೆ ಮುಖ್ಯವಾಗಿ ಕಿತ್ತೂರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟದ ೧೫೦ಕ್ಕೂ ಅಧಿಕ ವಿವಿಧ ಮಠಾಧೀಶರು ಪಾಲ್ಗೊಂಡು ಸರ್ಕಾರದ ವಿರುದ್ಧ ಧ್ವನಿ ಎತ್ತಿದರು. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಬಗ್ಗೆ ಎಲ್ಲ ಸರ್ಕಾರಗಳಿಂದಲೂ ಆಗುತ್ತಿರುವ ಅನ್ಯಾಯವನ್ನು ಗಟ್ಡಿಧ್ವನಿಯಲ್ಲಿ ಖಂಡಿಸಿದರು.

ಮಠಾಧೀಶರ ಬೆಂಬಲ ಒಂದು ಕಡೆಯಾದರೆ, ವಕೀಲರ ಪರಿಷತ್ ಸಹ ಸಂತ್ರಸ್ತರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ಘೋಷಿಸಿದರು. ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಗಳ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಇಡೀ ದಿನ ಧರಣಿಯಲ್ಲಿ ಪಾಲ್ಗೊಂಡರು. ಹಾಗೆಯೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಸಹ ತಮ್ಮ ಬೆಂಬಲಿಗ ಪಡೆಯೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ದರ ಜೊತೆಗೆ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಬೆಂಬಲಿಸಿ ಭಾಗವಹಿಸುವ ಮೂಲಕ ಹೋರಾಟದ ಕಿಚ್ಚನ್ನು ಮತ್ತಷ್ಟು ತೀವ್ರಗೊಳಿಸಿದರು.

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಧರಣಿ ಉದ್ದೇಶಿಸಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾದ ೧೯೬೪ದಿಂದ ಈ ವರೆಗೂ ಸಾಗಿ ಬಂದ ಹಾದಿಯನ್ನು ಮೆಲಕು ಹಾಕಿದರು. ೯೦ರ ದಶಕದಲ್ಲಿ ಕೃಷ್ಣಾ ಯೋಜನೆ ಹಂತ-೧ ಹಾಗೂ ೨ ರ ವಿಚಾರವಾಗಿ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸುವ ವೇಳೆ ಹಮ್ಮಿಕೊಂಡಿದ್ದ ಬೃಹತ್ ಪ್ರಮಾಣದ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯಾವೆಲ್ಲ ತಂತ್ರಗಳನ್ನು ಅನುಸರಿಸಿತ್ತು ಎನ್ನುವುದನ್ನು ಪ್ರತಿಭಟನಾಕಾರರ ಮುಂದಿಟ್ಟರು. ಹಾಗೆಯೇ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿರುವ ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಏನು ಬೇಕಾದರೂ ಮಾಡಲು ಮುಂದಾಗುತ್ತದೆ. ಮುಳುಗಡೆ ಸಂತ್ರಸ್ತರು ಹಾಗೂ ಹೋರಾಟದ ಮುಖಂಡರು ಹುಷಾರ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಈಗ ನಡೆಯುತ್ತಿರುವ ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡಯ್ಯಲು ಯಾವುದೇ ರೀತಿಯಲ್ಲೂ ಹೊಂದಾಣಿಕೆಗೂ ಮುಂದಾಗಬೇಡಿ. ಈ ಹೋರಾಟಕ್ಕೆ ನಾಡಿನ ಮಠಾಧೀಶರ ಬೆಂಬಲ ಇದೆ. ನಾವು ಮಠಾಧೀಶರಾಗುವ ಮುನ್ನ ರೈತರ ಮಕ್ಕಳಾಗಿ ಆ ಸಂಸ್ಕಾರದಲ್ಲಿ ಬೆಳೆದವರು. ಹೋರಾಟದ ಭಾಗವಾಗಿ ತಾವು ಯಾವುದೇ ಹೊತ್ತಿನಲ್ಲಿ ಎಲ್ಲಿಗೆ ಬೇಕಾದರೂ ಕರೆದರೂ ಹೋರಾಟಕ್ಕೆ ನಾವೆಲ್ಲ ಸಜ್ಜಾಗಿರುತ್ತೇವೆ. ನೀವು ಉಪವಾಸ ಸತ್ಯಾಗ್ರಹ ಮಾಡಿ ಎಂದರೆ ಅದಕ್ಕೂ ಸೈ... ಇಲ್ಲ ಸ್ವಾಮೀಜಿಗಳೇ ಬಡಿಗೆ ಹಿಡಿದು ನಿಲ್ಲಿ ಎಂದರೂ ಅದಕ್ಕೂ ಜೈ. ಸ್ವಾಮೀಜಿಗಳು ಮುಂದೆ ನಿಲ್ಲುತ್ತೇವೆ. ನೀವು(ಸಂತ್ರಸ್ತರು) ಹಿಂದೆ ನಿಲ್ಲಿ. ಸರ್ಕಾರ ಹೋರಾಟ ಹತ್ತಿಕ್ಕಲು ಗುಂಡುಕ್ಕಿದರೂ ಅದು ನಮಗೆ ಬೀಳಲಿ ಎಂದು ಹೋರಾಟದ ಉತ್ಸಾಹ ಕುಂದದಂತೆ ನೋಡಿಕೊಳ್ಳಲು ಧೈರ್ಯ ತುಂಬಿದರು.

ಈಗ ಹೋರಾಟ ಬಿಸಿ ಸರ್ಕಾರಕ್ಕೆ ತಾಕುವ ಲಕ್ಷಣಗಳು ಇವೆ. ಈ ವೇಳೆ ನಿಮ್ಮನ್ನು ದಾರಿ ತಪ್ಪಿಸಲು ನಾಲ್ಕೆದು ಜನರನ್ನು ಮಾತುಕತೆಗೆ ಬನ್ನಿ ಎಂದು ಸರ್ಕಾರ ಆವ್ಹಾನ ನೀಡುತ್ತದೆ. ಏನೋ ಒಂದು ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಾರೆ. ಸರ್ಕಾರ ಯಾವುದೇ ಇರಲಿ. ಜನರಿಗೆ ಪುಕ್ಕಟ್ಟೆ ಕೊಡಲು ಕೋಟಿ ಕೋಟಿ ಖರ್ಚು ಮಾಡಲು ಸರ್ಕಾರಕ್ಕೆ ಹಣ ಇರುತ್ತದೆ. ಅದೇ ರೈತರಿಗೆ ಅವರ ಜಮೀನು ಪಡೆದು ದುಡ್ಡು ಕೊಡಲು ಹಣ ಇಲ್ಲವೆಂದರೆ ಹೇಗೆ ಎಂದು ಪರೋಕ್ಷವಾಗಿ ಗ್ಯಾರಂಟಿಗೆ ಖರ್ಚು ಮಾಡುವ ಸರ್ಕಾರ ನೀರಾವರಿಗೆ ಅನುದಾನ ಕೊಡುತ್ತಿಲ್ಲವೇಕೆ ಎಂದು ಚುಚ್ಚಿದರು.