ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ 3 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿ, ಸರ್ಕಾರ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ. ನ. 1ರೊಳಗೆ ಪ್ರತ್ಯೇಕ ಪಾಲಿಕೆ ರಚನೆ ಮಾಡದಿದ್ದರೆ, ನ. 2ರಿಂದ ಧಾರವಾಡದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಪಾಲಿಕೆ ವಿಚಾರವಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಧಾರವಾಡ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ನಗರದ ರಸ್ತೆಗಳು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸಾರ್ವಜನಿಕ ಉದ್ಯಾನಗಳ ನಿರ್ವಹಣೆ ಕನಿಷ್ಠ ಮಟ್ಟದಲ್ಲಿದೆ. ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪಾಲಿಕೆ ಆಡಳಿತ ಹುಬ್ಬಳ್ಳಿ ಕೇಂದ್ರೀತವಾಗಿದ್ದು, ಧಾರವಾಡ ನಗರವನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
ಧಾರವಾಡ ವೇಗವಾಗಿ ಬೆಳೆಯುತ್ತಿದ್ದು, ವಿಶ್ವ ವಿದ್ಯಾಲಯಗಳು, ಐಐಟಿ, ಐಐಐಟಿ ಸೇರಿ ಅನೇಕ ಶಿಕ್ಷಣ ಸಂಸ್ಥೆಗಳು, ಹೈಕೋರ್ಟ್ ಪೀಠ ಆರಂಭಿಸಲಾಗಿದೆ. ಜತೆಗೆ ಅನೇಕ ಉದ್ಯಮಗಳ ಸ್ಥಾಪನೆ ಆಗಿವೆ. ಧಾರವಾಡ ಜಿಲ್ಲಾ ಕೇಂದ್ರವಾಗಿದ್ದರಿಂದ ಪ್ರತ್ಯೇಕ ಪಾಲಿಕೆ ಅಗತ್ಯವಿದೆ ಎಂದರು.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪ್ರತ್ಯೇಕ ಪಾಲಿಕೆ ರಚನೆ ಮಾಡುವ ಭರವಸೆ ನೀಡಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸ್ಥಳೀಯವಾಗಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಶಾಸಕರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕು. ಅಲ್ಲದೆ ರಾಜ್ಯ ಸರ್ಕಾರ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತ್ಯೇಕ ಪಾಲಿಕೆ ರಚನೆಗೆ ಸರ್ಕಾರಕ್ಕೆ ನ. 1ರವರೆಗೆ ಗಡವು ನೀಡಲಾಗುವುದು. ಅಷ್ಟರೊಳಗೆ ಘೋಷಣೆ ಮಾಡದಿದ್ದರೆ, ನಗರದ ವಿವಿಧ ಬಡಾವಣೆಗಳ ನಾಗರಿಕರೊಂದಿಗೆ ಪಾಲಿಕೆ ಕಚೇರಿ ಎದುರು ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಮುಖಂಡರಾದ ವಿಠ್ಠಲ ಕಮ್ಮಾರ, ಶಂಕರ ನೀರಾವರಿ, ರವಿಕುಮಾರ ಮಾಳಿಗೇರ, ನಾಗೇಶ ಕಟಕೋಳ, ಮಲ್ಲಿಕಾರ್ಜುನ ಎಂ., ಇತರರು ಇದ್ದರು.