ಜಿಲ್ಲೆ

ಉಪಯೋಗಕ್ಕೆ ಬಾರದ ಕಾಲ್​ ಬಾಕ್ಸ್​: ಸಾರ್ವಜನಿಕರ ಭದ್ರತೆ, ಸುರಕ್ಷತೆಗಾಗಿ ನಿರ್ಮಾಣ

ತುಮಕೂರು: ನಗರದ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ಮಾರ್ಟ್​ ಸಿಟಿ ಲಿಮಿಟೆಡ್​ ವತಿಯಿಂದ ನಗರ ವ್ಯಾಪ್ತಿಯ 41 ಪ್ರದೇಶಗಳಲ್ಲಿ ಪಬ್ಲಿಕ್​ ಅನೌನ್ಸ್​ಮೆಂಟ್​ ಮತ್ತು ಎಮರ್ಜೆನ್ಸಿ ಕಾಲ್​ ಬಾಕ್ಸ್​ ಅಳವಡಿಸಲಾಗಿದ್ದರೂ ನಿರುಪಯುಕ್ತ ಎನಿಸಿದೆ.

ನಗರದಲ್ಲಿ ಸ್ಮಾರ್ಟ್​ ಸಿಟಿ ಕೈಗೊಂಡಿರುವ ಪ್ರಮುಖ ಯೋಜನೆಗಳಲ್ಲೊಂದಾದ ಸಮಗ್ರ ನಗರ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ(ಐಸಿಎಂಸಿಸಿ) ಯೋಜನೆಯಡಿ ಈ ಎಮರ್ಜೆನ್ಸಿ ಕಾಲ್​ (ತುರ್ತು ಸಹಾಯವಾಣಿ) ಬಾಕ್ಸ್​ಗಳನ್ನು ಅಳವಡಿಸಲಾಗಿದೆ.

ಸಾರಿಗೆ, ಅಗ್ನಿಶಾಮಕ, ಜಲಮಂಡಳಿ, ಪೊಲೀಸ್​, ಇ&ಆಡಳಿತ ಸೇರಿ ವಿವಿಧ ಕ್ರಿಯಾತ್ಮಕ ಇಲಾಖೆಗಳನ್ನೊಳಗೊಂಡಂತೆ ಏಕೈಕ ವೇದಿಕೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವುದು ಈ ತುರ್ತು ಸಹಾಯವಾಣಿ ಉದ್ದೇಶವಾಗಿದೆ. ಸಾರ್ವಜನಿಕರು ಅಪಘಾತ, ಆಂಬುಲೆನ್ಸ್​ ಸೇವೆ, ಪೊಲೀಸ್​ 112 ಸೇವೆ, ಕಳವು, ಆರೋಗ್ಯ ಸೇವೆ, ಸಂಚಾರಿ ನಿಯಮ ಉಲ್ಲಂನೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್​ ಬಾಕ್ಸ್​ ಉಪಯೋಗಿಸಬಹುದು.

ರಸ್ತೆ ಅಪಘಾತ ಸೇರಿ ಮತ್ತಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಮೂಲಕ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ ಅಗತ್ಯ ನೆರವು ದೊರೆಯದೆ ಗಾಯಾಳುಗಳು ಸಾವನ್ನಪ್ಪಿರುವ ಎಷ್ಟೋ ನಿದರ್ಶನಗಳಿವೆ. ಇಂತಹ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಆಂಬುಲೆನ್ಸ್​ ಸೇವೆ, ಹೆಚ್ಚಿನ ವೈದ್ಯಕಿಯ ಚಿಕಿತ್ಸೆಗಾಗಿ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯುವ ಮೂಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗೆ ಮರು ಜೀವ ನೀಡಲು ಸಾಧ್ಯ ಮಾಡಬಹುದು.

ಎರಡು ವರ್ಷದಲ್ಲಿ 300 ಕರೆ!: ನಗರದಲ್ಲಿ 2020ರಲ್ಲಿ ಎಮರ್ಜೆನ್ಸಿ ಕಾಲ್​ ಬಾಕ್ಸ್​ ಅಳವಡಿಸಲಾಗಿದ್ದರೂ ಈವರೆಗೂ 300 ಕರೆ ಮಾತ್ರ ಸ್ವೀಕರಿಸಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ. ದಿನಪೂರ್ತಿ ಕಾರ್ಯನಿರ್ವಹಿಸುವ ಕಮಾಂಡ್​ ಅಂಡ್​ ಕಂಟ್ರೋಲ್​ ಸೆಂಟರ್​ನಲ್ಲಿ ಮಹಾನಗರ ಪಾಲಿಕೆ, ಪೊಲೀಸ್​ ಇಲಾಖೆ ಹಾಗೂ ಸ್ಮಾರ್ಟ್​ ಸಿಟಿ ಲಿಮಿಟೆಡ್​ನ 38 ಸಿಬ್ಬಂದಿಗಳು 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹಳಷ್ಟು ಜನರಿಗೆ ಎಮರ್ಜೆನ್ಸಿ ಕಾಲ್​ ಬಾಕ್ಸ್​ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ.

ನಗರದ 41 ಕಡೆ ಎಮರ್ಜೆನ್ಸಿ ಕಾಲ್​ ಬಾಕ್ಸ್​ ಅಳವಡಿಸಲಾಗಿದ್ದು, ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಕಾಲ್​ ಬಾಕ್ಸ್​ ಬಳಕೆ ಮಾಡುವ ಮೂಲಕ ಅಗತ್ಯ ನೆರವು ಪಡೆಯಬೇಕು. > ಬಿ.ಟಿ.ರಂಗಸ್ವಾಮಿ ಸ್ಮಾರ್ಟ್​ ಸಿಟಿ ವ್ಯವಸ್ಥಾಪಕ ನಿರ್ದೇಶಕ

ಎಮರ್ಜೆನ್ಸಿ ಕಾಲ್​ ಬಾಕ್ಸ್​ ಬಳಸುವ ವಿಧಾನ: ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್​ ಬಾಕ್ಸ್​ನಲ್ಲಿರುವ ಕೆಂಪು ಗುಂಡಿ ಒತ್ತಿ ಕರೆ ಮಾಡಬೇಕು. ತುರ್ತು ಸಹಾಯವಾಣಿಯಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು, ಕೆಂಪು ಗುಂಡಿ ಒತ್ತಿದ ಕೂಡಲೇ ಸ್ಮಾರ್ಟ್​ ಸಿಟಿ ಕಮಾಂಡ್​ ಮತ್ತು ಕಂಟ್ರೋಲ್​ ಸೆಂಟರ್​ಗೆ ವೀಡಿಯೋ ಕರೆ ಬರುತ್ತದೆ. ನಂತರ ಕಮ್ಯಾಂಡ್​ ಸೆಂಟರ್​ ಆಪರೇಟರ್​ಗಳು ಸ್ವೀಕೃತ ಕರೆ ಆಧರಿಸಿ ನಕಲಿ ಕರೆಯೋ ಅಥವಾ ಅಸಲೀ ಕರೆಯೋ ಎಂದು ತಿಳಿದು ಅಗತ್ಯ ಸೇವೆ ನೀಡಲಿದ್ದಾರೆ.

ನಗರದ 41 ಕಡೆ ಎಮರ್ಜೆನ್ಸಿ ಕಾಲ್​ ಬಾಕ್ಸ್​: ನಗರದ 41 ಕಡೆ ಎಮರ್ಜೆನ್ಸಿ ಬಾಕ್ಸ್​ಗಳನ್ನು ಅಳವಡಿಸಲಾಗಿದೆ, ನಗರ ವ್ಯಾಪ್ತಿಯ ದೇವರಾಯಪಟ್ಟಣ, ಸಿದ್ಧಗಂಗಾ ಮಠ ಮುಂಭಾಗದ ಗೇಟ್​, ಸಿದ್ಧಗಂಗಾ ಮಠ ಹಿಂಭಾಗದ ಗೇಟ್​, ಗೋಕುಲ್​ ಬಡಾವಣೆ, ಹನುಮಂತಪುರ, ಯಲ್ಲಾಪುರ, ಎಚ್​.ಎಂ.ಎಸ್​. ಸಾಲೆ, ದಿಬ್ಬೂರು, ರಾಣಿ ಚೆನ್ನಮ್ಮ ವೃತ್ತ, ಕಾರ್ತಿಕ್​ ಬಾರ್​, ಸಂಕ್ರಾಂತಿ ಸ್ಟೋರ್​, ಎಸ್​ಎಸ್​ಐಟಿ ಕಾಲೇಜು, ಮರಳೂರು ದಿಣ್ಣೆ, ಬನಶಂಕರಿ, ಮಾರುತಿ ನಗರ ಕಮಾನು, ಜಿಮ್​ ವೃತ್ತ, ಉಪ್ಪಾರಹಳ್ಳಿ ಆಟೋನಿಲ್ದಾಣ, ನಮ್ಮೂರ ಆಹಾರ, ದೋಬಿ ಘಾಟ್​, ಹೊರಪೇಟೆ ವೃತ್ತ, ಕೋತಿ ತೋಪು, ಅಮಾನಿಕೆರೆ ಪಾರ್ಕ್​, ರಂಗಾಪುರ ಸ್ಕೆವಾಕ್​, ಬಾಂಬೆ ಬಿಲ್ಡಿಂಗ್​, ಕುರಿಪಾಳ್ಯ ವೃತ್ತ, ಕೆಸರಮಡು, ಶೆಟ್ಟಿಹಳ್ಳಿ, ಗೆದ್ದಲಹಳ್ಳಿ, ಕ್ಯಾತಸಂದ್ರ, ಬಡವಾಡಿ, ಶಿವಕುಮಾರ ಸ್ವಾಮಿ ವೃತ್ತ, ಭದ್ರಮ್ಮ ವೃತ್ತ, ಕಾಲ್ಟೆಕ್ಸ್​ ವೃತ್ತ, ಗುಬ್ಬಿ ಗೇಟ್​, ಕೋಡಿ ವೃತ್ತದ ಬಳಿ ತಲಾ ಒಂದು ಹಾಗೂ ದಾನಾ ಪ್ಯಾಲೇಸ್​, ಶಿರಾ ಗೇಟ್​ ಪ್ರದೇಶದಲ್ಲಿ ತಲಾ 2 ಸೇರಿ 41 ಕಡೆ ಎಮರ್ಜೆನ್ಸಿ ಕಾಲ್​ ಬಾಕ್ಸ್​ ಲಭ್ಯವಿದೆ.