ಜಿಲ್ಲೆ

ಉಪನೋಂದಣಾಧಿಕಾರಿ ಕಟ್ಟಡಕ್ಕೆ ಮನವಿ

ಚಾಮರಾಜನಗರ : ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕುದೇರು ಗ್ರಾಮದ ಉಪನೋಂದಣಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸದನದಲ್ಲಿ ಬುಧವಾರ ಗಮನಸೆಳೆದರು.

ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಉಪನೋಂದಣಾಧಿಕಾರಿಗಳ ಕಚೇರಿ 1930ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಶಿಥಿಲಾವಸ್ಥೆಗೆ ತಲುಪಿದೆ. ಹಾಗಾಗಿ ಸ್ವಂತ ಕಟ್ಟಡವಿಲ್ಲದೆ ಕಳೆದ 1 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಗಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಂದಾಯ ಸಚಿವರ ಗಮನಸೆಳೆದರು.

ಈ ಪ್ರಶ್ನೆಗೆ ಕಂದಾಯ ಸಚಿವರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಉತ್ತರಿಸಿ, ಈ ಸಂಬಂಧ ಈಗಾಗಲೇ 1.36 ಕೋಟಿ ರೂ., ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಎಸ್ಟಿಮೇಟ್ ಮಾಡಲಾಗಿದ್ದು, ಕೆಆರ್‌ಡಿಐಎಲ್‌ನಿಂದ ಅಂದಾಜು ಪಟ್ಟಿ ತರಿಸಿಕೊಂಡು ಸಿದ್ಧಪಡಿಸಲಾಗಿದೆ. ಇದು ಆರ್ಥಿಕ ಇಲಾಖೆಯಲ್ಲಿ ಸಮಾಲೋಚನೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.