ಜಿಲ್ಲೆ

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ? : ನೋಂದಣಿಗಾಗಿ ಪ್ರತಿದಿನವೂ ಪರದಾಟ ; ಲಂಚಕೊಟ್ಟರೆ ಅಂದೇ ಕೆಲಸ ಪೂರ್ಣ

ಪಾವಗಡ : ತಾಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸಾಮಾನ್ಯ ರೈತರು ಪ್ರತಿದಿನ ನೋಂದಣಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ, ಕೆಲವು ವರ್ಷಗಳಿಂದ ಬೀಡುಬಿಟ್ಟಿರುವ ಕೆಲವು ಮಧ್ಯವರ್ತಿಗಳು ಗ್ರಾಮೀಣ ಜನರನ್ನು ಶೋಷಿಸುತ್ತಿರುವ ದೂರುಗಳಿವೆ.

ವಾರದಲ್ಲಿ ತಮಗಿಷ್ಟ ಬರುವ ಎರಡು ದಿನ ಕೆಲಸ ಮಾಡುತ್ತಿದ್ದು, ಉಳಿದ ದಿನ ನೂರಾರು ರೈತರು ಕಚೇರಿ ಬಾಗಿಲಿನಲ್ಲಿ ಕಾಯುತ್ತಿದ್ದಾರೆ.

ತಾಲೂಕಿನಲ್ಲಿ ಕೃಷಿ ಭೂಮಿಗೆ 1 ಲಕ್ಷ ರೂ. ಸ್ಟಾಂಪ್ ವ್ಯಾಲ್ಯೂ ನಿಗದಿಯಾಗಿದ್ದು, ಇದಕ್ಕಾಗಿ 6800ರೂ. ಕಟ್ಟಿಸಿಕೊಳ್ಳಬೇಕಿದೆ. ಆದರೆ, ಸ್ಕಾೃನಿಂಗ್, ಪ್ರಿಂಟಿಂಗ್, ಟೈಪಿಂಗ್ ಫೀಸುಗಳು ಇಲ್ಲಿ ಸೃಷ್ಟಿಯಾಗಿದ್ದು ಜನರಿಂದ ಹಣ ಪೀಕಲಾಗುತ್ತಿದೆ.

ತಾಂತ್ರಿಕ ದೋಷದ ನೆಪವೊಡ್ಡಿ ತಿಂಗಳಾನುಗಟ್ಟಲೆ ರೈತರನ್ನು ಅಲೆದಾಡಿಸಲಾಗುತ್ತಿದೆ, ಹಣ ಕೊಟ್ಟರೆ ಮಾತ್ರ ಆ ದಿನವೇ ನೋಂದಣಿಗೆ ಅವಕಾಶ ನೀಡುತ್ತಿರುವುದು ಸೋಜಿಗ ಎನಿಸುತ್ತದೆ. ಬಾಡಿಗೆ ಕಟ್ಟಡದಲ್ಲಿ ಕಚೇರಿ ಇರುವ ಕಾರಣಕ್ಕೆ ಮೂಲಸೌಕರ್ಯಗಳೂ ಮರೀಚಿಕೆಯಾಗಿದೆ, ಜನರಿಗೆ ಕಾಯಲು, ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ, ಕುಡಿಯುವ ನೀರು, ಶೌಚಗೃಹಕ್ಕೂ ಪರದಾಟವಿದೆ.

ಸ್ವಂತ ಕಟ್ಟಡದ ಅಗತ್ಯವಿದೆ, ತಾಲೂಕಿನಲ್ಲಿ ಲೈಸೆನ್ಸ್ ಇರುವ 36 ಪತ್ರ ಬರಹಗಾರರು ಮಾತ್ರವಿದ್ದಾರೆ. ಮಧ್ಯವರ್ತಿಗಳು ಹಣ ಕೇಳಿದರೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದು. ಹೊಸ ಕಚೇರಿ ನಿರ್ಮಾಣಕ್ಕೆ 10ಗುಂಟೆ ಜಾಗ ಗುರುತಿಸಲಾಗಿದೆ. ಪ್ರಸ್ತುತ 29600ರೂ. ಬಾಡಿಗೆ ಕೊಟ್ಟು ಕಚೇರಿ ನಡೆಸಲಾಗುತ್ತಿದೆ. ವೆಂಕಟೇಶ್, ಉಪನೋಂದಣಾಧಿಕಾರಿ, ಪಾವಗಡ ಪಾವಗಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜನರಿಗೆ ಸರಿಯಾಗಿ ಕೆಲಸವಾಗುತ್ತಿಲ್ಲ, ಅಮಾಯಕರಿಂದ ಎಲ್ಲದಕ್ಕೂ ಹಣ ಕೀಳಲಾಗುತ್ತಿದೆ, ಯಾವುದಕ್ಕೂ ರಶೀದಿ ನೀಡುವ ಅಭ್ಯಾಸವಿಲ್ಲ, ಮಧ್ಯವರ್ತಿಗಳ ಮೂಲಕವಷ್ಟೇ ನೋಂದಣಿ ಮಾಡಿಕೊಳ್ಳಬೇಕು, ಅಧಿಕಾರಿ, ಸಿಬ್ಬಂದಿ ಕಚೇರಿಗೆ ಬಂದಾಗಲಷ್ಟೇ ಕಚೇರಿ ಆರಂಭ. ರಮೇಶ್, ರೈತ, ಕೆ.ರಾಂಪುರ