ಬಾಗಲಕೋಟೆ: ಮುಂಬರುವ ಮೂರು ವಿಧಾನಸಭಾ ಉಪಚುನಾವಣೆ ಹಾಗೂ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ರೈತ ಭಾರತ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುತ್ತಪ್ಪ ಹಿರೇಕುಂಬಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ನಡೆಯುವ ಚುನಾವಣೆಗೆ ತೆರಳುತ್ತಿದ್ದು, ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ರಾಜ್ಯದಲ್ಲಿನ ಉಪಚುನಾವಣೆ ಜವಾಬ್ದಾರಿ ವಹಿಸಲಿದ್ದಾರೆ ಎಂದರು.
ಸದ್ಯದ ರಾಜಕೀಯದಲ್ಲಿ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ ವಿನಃ ಅಭಿವೃದ್ಧಿ ಕೆಲಸಗಳನ್ನು ಆಡಳಿತ ಪಕ್ಷದವರು ಮರೆತಿದ್ದು, ವಿಪಕ್ಷ ಕೂಡ ತನ್ನ ಕೆಲಸವನ್ನು ಮರೆತಿದೆ ಎಂದು ದೂರಿದ ಅವರು, ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಪಕ್ಷದ ಬೆಳಗಾವಿ ಮುಖಂಡ ರಾಮಪ್ಪ ಮುದ್ನೂರ ಮಾತನಾಡಿ, ರೈತರ ಜಮೀನುಗಳಿಗೆ ಸದ್ಯ ಸರ್ಕಾರ ೭ ಗಂಟೆ ವಿದ್ಯುತ್ ನೀಡಲಾಗುತ್ತಿದ್ದು, ಅದನ್ನು ೧೦ ಗಂಟೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶ್ರೀಶೈಲ ಗಣತಿ, ಸುರೇಶ ಗಣತಿ, ನಿಂಬಪ್ಪ ಗುಂಡಾರೆ ಸೇರಿದಂತೆ ಇತರರಿದ್ದರು.