ಜಿಲ್ಲೆ

ಉಪಚುನಾವಣೆ ಮೈತ್ರಿ ಪಾಲಿಸೋಣ

ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆ ಸಂಬಂಧ ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಭಾನುವಾರ ಮಹತ್ತರವಾದ ಸಭೆ ನಡೆಸಿದರು. ಮುಂಬರುವ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ವಿಚಾರವಾಗಿ ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸುದೀರ್ಘವಾಗಿ ಚರ್ಚಿಸಿದರು.

ಸಭೆಯಲ್ಲಿ ಬಹುತೇಕರು, ಕ್ಷೇತ್ರವನ್ನು ನಾವೇ ಉಳಿಸಿಕೊಳ್ಳೋಣ. ಸದ್ಯ ಜಿಲ್ಲೆಯಲ್ಲಿ ಜೆಡಿಎಸ್ ಇರುವ ಏಕೈಕ ಕ್ಷೇತ್ರ ಇದಾಗಿದೆ. ಭವಿಷ್ಯದ ದೃಷ್ಟಿಯಿಂದ ಪಕ್ಷದ ಅಭ್ಯರ್ಥಿ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕಿದೆ. ಪ್ರಸುತ್ತ ಇರುವ ಸ್ಥಾನವನ್ನು ಉಳಿಸಿಕೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದರೊಂದಿಗೆ, ಮೈತ್ರಿ ಪಕ್ಷದ ನಾಯಕ ಸಿ.ಪಿ.ಯೋಗೇಶ್ವರ್ ವಿಶ್ವಾಸದೊಂದಿಗೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡಿ ಎಂಬ ಒತ್ತಡ ಹೇರಿದರು.

ಕಾರ್ಯಕರ್ತರನ್ನೇ ಕಣಕ್ಕಿಳಿಸುವೆ!: ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ಎಚ್.ಡಿ.ಕುಮಾರಸ್ವಾಮಿ, ಈ ಚುನಾವಣೆ ನಮಗೆ ಪ್ರತಿಷ್ಠೆಯ ವಿಚಾರ. ಜೆಡಿಎಸ್ ಕಾರ್ಯಕರ್ತರು, ಮುಖಂಡರ ತೀರ್ಮಾನದಂತೆ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಲು ನನ್ನ ಸಹಮತವಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಮಾಡುತ್ತೇನೆ. ನಿಮ್ಮಲ್ಲೇ ಯಾರಾದರೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ನಮಗೆ ಬಿಜೆಪಿ ನಾಯಕರ ಸಹಕಾರವೂ ಅತ್ಯವಶ್ಯಕ. ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಜತೆ ಚರ್ಚೆ ನಡೆಸಿ, ಅವರ ವಿಶ್ವಾಸ ಪಡೆದು ಚುನಾವಣೆ ಎದುರಿಸೋಣ ಎಂದರು.
ಮುಖಂಡರಾದ ಗೋವಿಂದನಹಳ್ಳಿ ನಾಗರಾಜು, ನಿಡಗೋಡಿ ಬಾಬು, ನರ್ಸರಿ ಲೋಕೇಶ್, ಬೋರ್‌ವೆಲ್ ರಾಮಚಂದ್ರು, ಗರಕಹಳ್ಳಿ ಕೃಷ್ಣೇಗೌಡ, ಅರಳಾಪುರ ಸುರೇಶ್, ಮೆಹರೀಶ್, ದ್ಯಾವಪಟ್ಟಣ ಮಲ್ಲೇಶ್, ಪ್ರಧಾನ್ ರಾಜು, ರೇಖಾ ಉಮಾಶಂಕರ್ ಸೇರಿ ಇತರರು ಇದ್ದರು.

ಗೆಲುವು ಸುಲಭವಲ್ಲ! : ಈ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸಾಕಷ್ಟು ಹೋರಾಟ ಮಾಡುತ್ತಿದೆ. ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಲ್ಲ. ಅವರ ರಾಜಕೀಯ ತಂತ್ರಗಳಿಗೆ ನಾವು ಸಹ ಸಿದ್ಧರಾಗಿರಬೇಕು. ಯಾವುದೇ ಗೊಂದಲವಿಲ್ಲದೇ ಈ ಚುನಾವಣೆ ಎದುರಿಸಬೇಕು. ಅಭ್ಯರ್ಥಿ ನಮ್ಮ ಪಕ್ಷದವವೇ ಆಗಲಿ ಅಥವಾ ಯೋಗೇಶ್ವರ್ ಆಗಲಿ ಗೆಲುವು ಮೈತ್ರಿಯದ್ದಾಗಬೇಕು ಎಂದು ಎಚ್‌ಡಿಕೆ ಹೇಳಿದರು.

ನಿಖಿಲ್ ಸ್ಪರ್ಧೆ ಇಲ್ಲ! : ಯಾವುದೇ ಕಾರಣಕ್ಕೂ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನನ್ನು ಸಹಿತ ಅವರಿಗೂ ಇದರ ಬಗ್ಗೆ ಒಲವಿಲ್ಲ. ಅನಗತ್ಯವಾಗಿ ನಿಖಿಲ್ ಸ್ಪರ್ಧೆ ಬಗ್ಗೆ ಯಾರು ಸಹ ಮಾತನಾಡಬೇಡಿ ಎಂದು ಎಚ್‌ಡಿಕೆ ತಿಳಿಸಿದರು.

ಗೌರವ ಉಳಿಸಿಕೊಳ್ಳಬೇಕು!
ಕೇಂದ್ರ ಸರ್ಕಾರ ನನ್ನನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಗೌರವ ಸಿಗುತ್ತಿದೆ. ಪ್ರಧಾನಿ ಮೋದಿ ಅವರು ನನ್ನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ. ಉಪಚುನಾವಣೆಯಲ್ಲಿ ಮೈತ್ರಿ ಧರ್ಮಪಾಲನೆ ಮಾಡುವ ಮೂಲಕ ಆ ಗೌರವ ಉಳಿಸಿಕೊಳ್ಳೋಣ. ಚುನಾವಣೆ ಸಂಬಂಧ ಬಿಜೆಪಿ ನಾಯಕರ ವಿಶ್ವಾಸ ಅವಶ್ಯಕತೆ ಇದೆ ಎಂಬುದನ್ನು ಎಚ್‌ಡಿಕೆ ಮನವರಿಕೆ ಮಾಡಿಕೊಟ್ಟರು.