ಜಿಲ್ಲೆ

ಉಪಚುನಾಣೆಯಲ್ಲಿ ಮೂರೂ ಕ್ಷೇತ್ರಗಳಲ್ಲೂ ಮೈತ್ರಿಗೆ ಗೆಲ್ಲುತ್ತೇವೆ:ವಿ.ಸೋಮಣ್ಣ

ಹಾಸನ: ವಿಧಾನಸಭೆ ಉಪಚುನಾಣೆಯಲ್ಲಿ ಮೂರೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ನಾನು ನ.2 ರಿಂದ ಪ್ರಚಾರಕ್ಕೆ ಹೋಗುತ್ತೇನೆ. ನಾವೇ ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ. ನಾನು ಕೂಡ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಸೋಮವಾರ ನಗರದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು-ಬೇಲೂರು-ಆಲೂರು ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಜಿಲ್ಲಾಧಿಕಾರಿ ಶೀಘ್ರವೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದ್ದು, ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಂಗಳೂರಿಗೆ ಹೆಚ್ಚುವರಿ ರೈಲು ಸಂಚಾರದ ಜತೆಗೆ ಚಿಕ್ಕಮಗಳೂರು-ಬೇಲೂರು-ಆಲೂರಿಗೆ 585 ಎಕರೆ ಜಾಗ ಸ್ವಾಧೀನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ನಾನು ಬಂದ ಮೇಲೆ ಕರ್ನಾಟಕ ರಾಜ್ಯದಲ್ಲಿ ಹನ್ನೊಂದು ಯೋಜನೆಗಳು 1800 ಹೊಸ ಲೈನ್‌ಗಳನ್ನು ಹಾಕಲು ಚಾಲನೆ ನೀಡಲಾಗಿದೆ. ಈಗಾಗಲೇ ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಸೇರಿದಂತೆ ಹಲವಾರು ಕಡೆ ಕೆಲಸ ನಡೆಯುತ್ತಿದೆ ಎಂದರು.

43 ಸಾವಿರ ಕೋಟಿ ರೂ. ನನೆಗುದಿಗೆ ಬಿದ್ದಿರುವ ಕೆಲಸ ಕೈಗೆತ್ತುಕೊಂಡಿದ್ದೇವೆ. ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಮಸ್ಯೆ ಆಗಿದೆ. ಅದನ್ನು ಶೀಘ್ರವೇ ಬಗೆಹರಿಸಲಾಗುವುದು. 44 ಸಾವಿರ ಡಬ್ಲಿಂಗ್ ಲೈನ್‌ನ್ನು ಮಾಡಿ, ಶೇ. 98 ಎಲೆಕ್ಟ್ರಿಫಿಕೇಷನ್ ಮಾಡಿ ಹೊಸ ಲೈನ್‌ಗಳನ್ನು ತ್ವರಿತಗತಿಯಲ್ಲಿ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.

104 ವಂದೇ ಭಾರತ್ ರೈಲುಗಳು 24 ರಾಜ್ಯಗಳಲ್ಲಿ 294 ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ 10 ರೈಲುಗಳು ಸಂಚರಿಸುತ್ತಿವೆ. ಹೊಸದಾಗಿ 30 ಸಾವಿರ ಹೊಸ ಬೋಗಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದೊಂದು ಪ್ಯಾಸೆಂಜರ್ ರೈಲುಗಳಿಗೆ ಮೂರು- ನಾಲ್ಕು ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ತುಮಕೂರಿನಿಂದ ಬೆಂಗಳೂರಿಗೆ ಮೆಮೊ ಟ್ರೈನ್ ಸಂಚಾರ ಆರಂಭಿಸಲಾಗಿದೆ ಎಂದರು.

ಭಾರತೀಯ ರೈಲ್ವೆ ಇಲಾಖೆ ವಿಶ್ವ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಆಗಿದೆ. ನ.1, ನ.2 ರಂದು ಪ್ರಧಾನಮಂತ್ರಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಒಂದು ಲಕ್ಷ ಉದ್ಯೋಗಿಗಳಿಗೆ ಅರ್ಹತಾ ಪತ್ರ ಕೊಡಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ಅವರ ಚಿಂತನೆ ಎಂದು ಹೇಳಿದರು.

ಶಾಸಕರಾದ ಸಿಮೆಂಟ್ ಮಂಜು, ಹುಲ್ಲಳ್ಳಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಮುಖಂಡರಾದ ಶೋಭನ್ ಬಾಬು, ಎಚ್.ಎನ್. ನಾಗೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಎಸ್ಪಿ ಮೊಹಮ್ಮದ್ ಸುಜೀತಾ ಇತರರು ಉಪಸ್ಥಿತರಿದ್ದರು.

ಹಾಸನಾಂಬೆ ವಿಶ್ವವಿಖ್ಯಾತಿ

ಸೂರ್ಯಚಂದ್ರ ಇರುವವರೆಗೂ ಹಾಸನಾಂಬೆ ತಾಯಿ ಶಕ್ತಿ ಎಲ್ಲೆಡೆ ಇದ್ದೆ ಇರುತ್ತದೆ. ದುಷ್ಟರನ್ನು ಶಿಕ್ಷಿಸಿ ನಂಬಿದವರಿಗೆ ಒಳ್ಳೆಯದನ್ನು ಮಾಡಲಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಾಯಿ ದರ್ಶನ ಪಡೆದ ನಂತರ ಹೇಳಿದರು.

ಸಾವಿರಾರು ವರ್ಷದ ಇತಿಹಾಸವಿರುವ ಹಾಸನಾಂಬೆ ದೇವಾಲಯದ ಬಗ್ಗೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಲ್ಲವನಾಗಿದ್ದೇನೆ. ನನ್ನ ಅನುಭವದಲ್ಲಿ ಈ ಬಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬರುವ ಭಕ್ತರಿಗೆ ದೇವಿ ದರ್ಶನಕ್ಕೆ ಅತ್ಯುತ್ತಮವಾದ ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಭಾರತ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಾನು ಸತತವಾಗಿ ಎರಡು, ಮೂರು ಬಾರಿ ದೇವಿ ದರ್ಶನ ಮಾಡಿದ್ದೇನೆ. ಭಾನುವಾರ ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ದರ್ಶನ ಪಡೆದಿದ್ದಾರೆ. ಹಾಸನಾಂಬೆ ದೇವಿ ವಿಶ್ವವಿಖ್ಯಾತಿ ಗಳಿಸುತ್ತಿದೆ. ತಾಯಿಯ ಪವಾಡಗಳು, ತನ್ನನ್ನು ನಂಬಿರುವ ಭಕ್ತರಗೆ ಕೊಡುಗೆಗಳನ್ನು ಕೊಟ್ಟಿದೆ. ಅದರಿಂದಾಗಿ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ ಎಂದರು.