ರಾಯಬಾಗ, ಬೆಳಗಾವಿ: ಉಪಕಾರ ಮಾಡಿದವರನ್ನು ಸ್ಮರಿಸುವುದು ಮಾನವೀಯ ಗುಣವಾಗಿದೆ ಎಂದು ಸಾಹಿತಿ ಡಾ. ಶಂಭು ಬಳಿಗಾರ ಹೇಳಿದರು.
ಪಟ್ಟಣದ ಭರಮ ಅಣ್ಣಪ್ಪ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಒಂದು ಶಿಕ್ಷಣ ಸಂಸ್ಥೆ ಪ್ರಗತಿ ಹೊಂದಿ, ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರೂ ಕೈಜೋಡಿಸಬೇಕು. ನಾವೆಲ್ಲರೂ ಸಮಾಜದ ಋಣದಲ್ಲಿದ್ದೇವೆ.ಸಮಾಜಕ್ಕೆ ಪ್ರತಿಯಾಗಿ ಏನಾದರೂ ಕೊಡಬೇಕು. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು. ಸಾನ್ನಿಧ್ಯ ವಹಿಸಿ ಹಂಚಿನಾಳ ಭಕ್ತಿ ಯೋಗಾಶ್ರಮದ ಮಹೇಶಾನಂದ ಶ್ರೀಗಳು ಮಾತನಾಡಿ, ಭಾರತ ದೇಶ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದೆ. ವಿದ್ಯೆ ಮತ್ತು ಜ್ಞಾನ ಹೊಂದಿದ ವ್ಯಕ್ತಿಯ ಜೀವನ ಅತ್ಯಂತ ಯಶಸ್ವಿಯಾಗಿ ಸಾಗುತ್ತದೆ ಎಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ವಿನಯ ಚೌಗುಲೆ, ನಿರ್ದೇಶಕ ಅಮರ ನಾಗರಾಳೆ, ಸಾಹಿತಿ ಟಿ.ಎಸ್.ವಂಟಗೂಡಿ, ಕುಮಾರ ಹಿರೇಮಠ, ಸಿದ್ದು ಚೌಗಲಾ, ಕಲ್ಯಾಣರಾವ ದೇಶಪಾಂಡೆ, ಡಾ. ಎಸ್.ಎಸ್.ಬಾನೆ, ಪ್ರಾಚಾರ್ಯ ಎಸ್.ಎ.ನಾಂದಣಿ, ಪ್ರಾಚಾರ್ಯ ಎಸ್. ಎಸ್.ದಿಗ್ಗೇವಾಡಿ, ಆರ್.ವೈ.ಯಮಗಾರ, ಪಲ್ಲವಿ ನಾಯಿಕ ಇತರರು ಇದ್ದರು.