ಜಿಲ್ಲೆ

ಉಪಕಾರ ಸ್ಮರಣೆ ಎಂದಿಗೂ ಮರೆಯದಿರಿ

ಯಾದಗಿರಿ: ಮನುಷ್ಯರಾದವರು ಜೀವನದಲ್ಲಿ ಉಪಕಾರ ಸ್ಮರಣೆಯನ್ನು ಎಂದಿಗೂ ಮರೆಯಕೂಡದು ಎಂದು ರಾಮಕೃಷ್ಣಾಶ್ರಮದ ಸಂಚಾಲಕ ಪಿ.ವೇಣುಗೋಪಾಲ ಸಲಹೆ ನೀಡಿದರು.

ಭಾನುವಾರ ಇಲ್ಲಿನ ಸುರಗಿಮಠ ರಕ್ತನಿಧಿ ಕೇಂದ್ರದಲ್ಲಿ ವಿಶ್ವ ಹಿಂದು ಪರಿಷತ್ನಿಂದ ರಾಮಜನ್ಮ ಭೂಮಿ ಹೋರಾಟದಲ್ಲಿ ಬಲಿದಾನ ಮಾಡಿದವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಭು ಶ್ರೀರಾಮ ಧರ್ಮದ ಪರ್ಯಾಯ ಪದ. ಶ್ರೀರಾಮಚಂದ್ರ ತಿಳಿಸಿದಂತೆ ನಾವು ಯಾರಿಂದಲಾದರೂ ಉಪಕೃತರಾದರೆ ಖಂಡಿತವಾಗಿಯೂ ಅವರನ್ನು ಸ್ಮರಿಸಿಕೊಳ್ಳುವುದು ಅಗ್ಯವಾಗಿದೆ ಎಂದರು.

ಧರ್ಮದ ಹಾದಿಯಲ್ಲಿ ಮುನ್ನಡೆದಾಗ ನಮಗೆ ಜಯ ಕಟ್ಟಿಟ್ಟ ಬುತ್ತಿ. ಆರಂಭದಲ್ಲಿ ಕೊಂಚ ತೊಂದರೆ, ಕಷ್ಟಗಳು ಎದುರಿಸಿದರೂ ಮುಂದಿನ ಹಾದಿ ಸುಗಮವಾಗಿಯೇ ಇರುತ್ತಾದೆ. ಧರ್ಮಕ್ಕೆ ನಾವು ಮನ್ನಣೆ ನೀಡಿದಾಗ ಅದು ನಮ್ಮನ್ನು ಸಂರಕ್ಷಿಸುತ್ತದೆ. ಕೋಟ್ಯಾಂತರ ಹಿಂದುಗಳ ಹೋರಾಟದ ಫಲವಾಗಿ ಇಂದು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.

ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಸುರಗಿಮಠ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ 16 ಲಾಭಗಳಿವೆ. ಹೃದಯಾಘಾತ, ಕ್ಯಾನ್ಸರ್ನಂಥ ಮಾರಕ ಕಾಯಿಲೆಗಳು ನಮ್ಮಲ್ಲಿ ಸುಳಿಯುವುದಿಲ್ಲ. ಇಂದಿನ ಯುವಕರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಇದೆ. ಅದು ದೂರವಾಗಬೇಕಾದರೆ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಆರೋಗ್ಯ ತೊಂದರೆಯಲ್ಲಿರುವವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮತ್ತೊಬ್ಬರ ಜೀವ ಉಳಿಸುವ ಅಮೂಲ್ಯ ದೃವ್ಯವಾಗಿರುವ ರಕ್ತವನ್ನು ದಾನ ಮಾಡುವುದರಿಂದ ಪುಣ್ಯದ ಜತೆಗೆ ನಮ್ಮ ದೇಹದಲ್ಲಿ ಹೊಸ ಚೈತನ್ಯ ಮೂಡಲಿದೆ ಎಂದರು. ವಿಶ್ವ ಹಿಂದು ಪರಿಷತ್ನ ಜಿಲ್ಲಾ ಸಂಯೋಜಕ ರಾಜೇಂದ್ರ, ನಗರಸಭೆ ಸದಸ್ಯ ಅಂಬಯ್ಯಾ ಶಾಬಾದಿ, ನಿವೃತ್ತ ಮುಖ್ಯಗುರು ತಿಪ್ಪಣ್ಣ ಹೂಗಾರ, ರಮೇಶ ಕೋಟಿಮನಿ ಇತರರು ಇದ್ದರು.