ಕಲಬುರಗಿ: ತಾಂತ್ರಿಕ ಉಪಕರಣಗಳ ಗುಣಮಟ್ಟ ಮತ್ತು ಮಾಪನಾಂಕನ ನಿರ್ಣಯ ಅತೀ ಮಹತ್ವದಾಗಿದೆ. ಆರೋಗ್ಯ ಸುರಕ್ಷಾ ಉಪಕರಣಗಳು ಗುಣಮಟ್ಟ ಕಾಪಾಡಿಕೊಳ್ಳಬೇಕಿದೆ. ಕೆಲವೊಮ್ಮೆ ಉಪಕರಣಗಳು ಸೂಕ್ತ ಮಾಪನಾಂಕನವಿಲ್ಲದ ಕಾರಣ ಅಪಘಾತಕ್ಕೆ ದಾರಿಮಾಡಿಕೊಡುವ ಸಾಧ್ಯತೆಗಳಿವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರೂ ಆದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.
ನಗರದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕನ ನಿರ್ಣಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗವು ಬೆಂಗಳೂರು ಮೂಲದ ವೆಂಜಿನ್ಸ್ ಟೆಕ್ನಾಲಜಿಯೊಂದಿಗೆ ಜಂಟಿಯಾಗಿ ಈ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕನ ನಿರ್ಣಯ ಕೇಂದ್ರ ಸ್ಥಾಪಿಸಿದ್ದು, ಅದು ವಿವಿಧ ರೀತಿಯ ತಾಂತ್ರಿಕ ಉಪಕರಣಗಳ ನಿರ್ವಹಣೆ ಮತ್ತು ಮಾಪನಾಂಕನ ನಿರ್ಣಯ ಮಾಡಲಾಗುವುದು. ಇದರಿಂದ ಸಂಶೋಧನೆ ನಿರತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೊಂದರೆರಹಿತ ಕಾರ್ಯ ನಿರ್ವಹಿಸಬಹುದಾಗಿದೆ. ಈ ರೀತಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕ ನಿರ್ಣಯ ಕೇಂದ್ರವು ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಸ್ಥಾಪಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ಹೈ.ಕ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿಯವರು ವಿಭಾಗದ ಶಿಕ್ಷಕರ ಪರಿಶ್ರಮ ಕೊಂಡಾಡಿ ಈ ರೀತಿಯ ಮಾಪನಾಂಕನ ನಿರ್ಣಯ ಕೇಂದ್ರಗಳು ಸ್ಥಳಿಯ ತಾಂತ್ರಿಕ ಮತ್ತು ಆರೋಗ್ಯ ಉಪಕರಣಗಳ ನಿರ್ವಹಣೆಗೆ ಸಹಾಯಕಾರಿಯಾಗಿದೆ ಎಂದರು.
ಈ ಕೇಂದ್ರವು ಉಪಕರಣಗಳ ಸುರಕ್ಷತೆ ಮತ್ತು ಸಮಾಜಕ್ಕೆ ಅವುಗಳಿಂದ ಆಗುವ ಲಾಭ ಗಮನದಲ್ಲಿರಿಸಿಕೊಂಡು ಅವುಗಳ ನಿರ್ವಹಣೆ ನಡೆಸಲಾಗುವುದು ಎಂದು ವಿಭಾಗದ ಮುಖ್ಯಸ್ಥ ಡಾ. ರಾಜು ಯಾನಮಶೆಟ್ಟಿ ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸತೀಶ್ಚಂದ್ರ ಹಡಗಲಿಮಠ ಇದ್ದರು. ಸಂಯೋಜಕರಾಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಸ್. ಹೆಬ್ಬಾಳ ಮತ್ತು ಸಂಚಾಲಕರಾಗಿ ವಿಭಾಗದ ಮುಖ್ಯಸ್ಥ ಡಾ.ರಾಜು ಯಾನಮಶೆಟ್ಟಿ ಕಾರ್ಯ ನಿರ್ವಹಿಸಿದರು. ಡಾ. ಗೀತಾ ಪಾಟೀಲ ವಂದಿಸಿದರು. ಪ್ರೊ.ಪದ್ಮಪ್ರೀಯಾ ಪಾಟೀಲ ನಿರೂಪಣೆ ಮಾಡಿದರು.