ಜಿಲ್ಲೆ

ಉಪ ಲೋಕಾಯುಕ್ತ ಸಿಟಿರೌಂಡ್; ಪಾರ್ಕ್ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ

ಹಾಸನ: ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಗುರುವಾರ ಬೆಳಗ್ಗೆ ನಗರದ ಮಹಾರಾಜ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶೌಚಾಲಯ ಸ್ವಚ್ಛತೆಗೆ ಕ್ರಮವಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಪಾರ್ಕ್‌ನಲ್ಲಿರುವ ಹಳೆಯ ಶೌಚಾಲಯದ ಬೀಗ ತೆಗೆದು ಸ್ವಚ್ಛತೆಗೆ ತಕ್ಷಣ ಕ್ರಮವಹಿಸಿ ಸಾರ್ವಜನಿಕರ ಬಳಕೆಗೆ ಕಲ್ಪಿಸಿ ಎಂದ ಅವರು, ಪಾರ್ಕ್‌ನಲ್ಲಿರುವ ಮತ್ಸ್ಯಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ, ಭದ್ರತಾ ಸಿಬ್ಬಂದಿ ನೇಮಿಸುವಂತೆ ನಿರ್ದೇಶನ ನೀಡಿದರು.
ಮಕ್ಕಳ ಆಟಿಕೆ ಅಳವಡಿಸಿರುವ ಸ್ಥಳ ಸಮತಟ್ಟಾಗಿರಲಿ ಎಂದು ಸಲಹೆ ನೀಡಿದರು. ಪಾರ್ಕ್‌ನಲ್ಲಿ ವಾಕ್ ಮಾಡುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಿದ್ಯುತ್ ಸಂಪರ್ಕದ ಕೇಬಲ್‌ಗಳು ಮೇಲೆ ಕಾಣಿಸದಂತೆ ಮುಚ್ಚಿಸಲು ಕ್ರಮವಹಿಸಿ. ಸಾರ್ವಜನಿಕರೆಲ್ಲ ಸೇರಿ ಒಂದು ಅಸೋಸಿಯೇಷನ್ ಮಾಡಿಕೊಂಡು ಮಕ್ಕಳ ಆಟಿಗೆ ದುರ್ಬಳಕೆ ಮಾಡುವವರಿಗೆ ತಿಳಿವಳಿಕೆ ನೀಡಿ ಎಂದರು.
 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಾರ್ಕ್‌ನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ಪಾರ್ಕ್‌ನಲ್ಲಿ ಸ್ವಚ್ಛಂದ ವಾತಾವರಣ ಕಾಪಾಡಿ ಎಂದು ಸೂಚಿಸಿದ ಅವರು, ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಜತೆಗೆ ಸೈನ್ ಬೋರ್ಡ್ ಅಳವಡಿಸಲು ಸೂಚಿಸಿದರು. ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು. ಪಾರ್ಕ್‌ಗೆ ಹೆಚ್ಚಾಗಿ ಕುಡುಕರು ಬರುತ್ತಾರೆ ಎಂಬ ದೂರು ಕೇಳಿ ಬಂದಿದ್ದು, ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿ ಅಂಥವರ ಬಗ್ಗೆ ನಿಗಾವಹಿಸಿ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದರು.
ನಂತರ ಕೆ.ಎಸ್.ಆರ್.ಟಿ.ಸಿ. ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಅಂಗಡಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಮಾರಾಟ ಮಾಡದಂತೆ, ಪದಾರ್ಥಗಳ ಗುಣಮಟ್ಟದ ಬಗ್ಗೆ ಗಮನಹರಿಸಿ ಎಂದರು.
ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಮಾಲೀಕರ ಪರವಾನಗಿ ರದ್ದುಮಾಡಲು ಕ್ರಮವಹಿಸುವಂತೆ ಕೆಎಸ್‌ಆರ್‌ಟಿಸಿ ಡಿಸಿ ದೀಪಕ್ ಅವರಿಗೆ ಸೂಚನೆ ನೀಡಿದರು. ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಸ್ವಚ್ಛತೆಗೆ ಆದ್ಯತೆ ನೀಡಿ, ಬಸ್ ನಿಲ್ದಾಣದಲ್ಲಿ ಗಡಿಯಾರ ಅಳವಡಿಸಿ ಎಂದು ತಿಳಿಸಿದರು.
ಬಳಕೆ ಆಗದೇ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ಬಳಕೆ ಮಾಡಲು ಕ್ರಮ ಕೈಗೊಳ್ಳಿ ಎಂದರು.
ಬಳಿಕ ಸತ್ಯಮಂಗಲ ಕೆರೆ ಅಂಗಳದಲ್ಲಿರುವ ತ್ಯಾಜ್ಯ ಹಾಗೂ ಹೂಳು ತೆಗೆಸಲು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಸ್ವಚ್ಛತೆಗೆ ಒತ್ತು ನೀಡಿ, ವಾಯುವಿಹಾರಕ್ಕೆ ತೊಂದರೆ ಆಗದಂತೆ ವಾಕಿಂಗ್ ಪಾತ್ ಅಕ್ಕಪಕ್ಕದ ಗಿಡಗಂಟೆ ತೆಗೆದು ಹಾಕಿ, ಜೋತು ಬಿದ್ದಿರುವ ಮರಗಳ ಕೊಂಬೆ, ರೆಂಬೆ ಕತ್ತರಿಸಿ ಎಂದರು.
ಸತ್ಯಮಂಗಲ ಕೆರೆಯಲ್ಲಿ ಮೀನುಗಾರಿಕೆಗೆ ಒತ್ತು ನೀಡಿ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ತಿಳಿಸಿದರು.
ಲೋಕಾಯುಕ್ತದ ವಿಚಾರಣೆಗಳು 7ನೇ ಅಪರ ನಿಬಂಧಕ ಪೃಥ್ವಿರಾಜ್ ವೆರ್ಣೇಕರ್, ಕಾನೂನು ಅಭಿಪ್ರಾಯ 2 ಸಹಾಯಕ ನಿಬಂಧಕ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶುಭವೀರ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ದಾಕ್ಷಾಯಿಣಿ, ಸಿವಿಲ್ ನ್ಯಾಯಾಧೀಶ ಹಾಗೂ ಉಪಯೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಪಂ ಸಿಇಒ ಪೂರ್ಣಿಮಾ, ಎಡಿಸಿ ಕೆ.ಟಿ.ಶಾಂತಲ, ಲೋಕಾಯುಕ್ತ ಹಾಸನ ವಿಭಾಗದ ಪೊಲೀಸ್ ಅಧೀಕ್ಷಕರಾದ ಸ್ನೇಹ ಪಿ.ವಿ. ಎಎಸ್ಪಿ ತಮ್ಮಯ್ಯ ಇದ್ದರು.