ವಿಜಯವಾಣಿ ಸುದ್ದಿಜಾಲ ಧಾರವಾಡ
ಅನ್ನದಾತ, ಭಾಗ್ಯವಿದಾತ ರೈತ ದೇಶದ ಜಿಡಿಪಿಗೂ ಕೊಡುಗೆ ನೀಡುತ್ತಾನೆ. ವಿಕಸಿತ ಭಾರತ ಕನಸು ಈಡೇರಲು ರೈತ ಸದೃಢ, ಕೃಷಿ ಲಾಭದಾಯಕವಾಗಬೇಕು. ಶೀತಲಗೃಹ ನಿರ್ಮಾಣ, ಮಾರುಕಟ್ಟೆ ಮೌಲ್ಯವರ್ಧನೆ, ರೈತರು ಬೆಳೆದ ಕೃಷಿ ವಸ್ತುಗಳನ್ನು ರಫ್ತು ಮಾಡುವಂತಾಗಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಗಳಿಸುವ ಲಾಭದಲ್ಲಿ ಸಿಎಸ್‌ಆರ್ ನಿಧಿಯಡಿ ರೈತರಿಗೆ ಕೊಡುಗೆ ನೀಡಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಮಹಾವಿದ್ಯಾಲಯದ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಗೆ ಹವಾಮಾನ ವೈಪರೀತ್ಯ ಬಹುದೊಡ್ಡ ಸವಾಲು. ಈ ದಿಶೆಯಲ್ಲಿ ಕೃಷಿ ವಿಶ್ವವಿದ್ಯಾಲಯವು ರೈತರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿಶ್ವದ 3ನೇ ಆರ್ಥಿಕ ಶಕ್ತಿಯಾಗುವತ್ತ ಭಾರತ ದಾಪುಗಾಲು ಇಡುತ್ತಿದೆ ಎಂದರು.
ಕೃಷಿ ಮಹಾವಿದ್ಯಾಲಯಕ್ಕೆ 75 ವರ್ಷ ಸಂದಿರುವುದು ಅಮೃತ ಘಳಿಗೆ. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಕಲಿತ ಸಂಸ್ಥೆಗೆ ಕೊಡುಗೆ ನೀಡಬೇಕು. ಜತೆಗೆ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ವಿಶ್ವವಿದ್ಯಾಲಯಗಳು ಸಂಶೋಧನೆಗೆ ಒತ್ತು ನೀಡಬೇಕು. ಔಷಧೀಯ ಗುಣವುಳ್ಳ ಅರಿಷಿಣದಂತಹ ಕೃಷಿ ಉತ್ಪನ್ನವನ್ನು ಮೌಲ್ಯವರ್ಧನ ಮಾಡಲು ಕೃಷಿ ವಿಶ್ವವಿದ್ಯಾಲಯಗಳು ಶ್ರಮಿಸಬೇಕು ಎಂದರು.
ರಾಜ್ಯಪಾಲ ಥಾವರಚಂದ ಗೆಹಲೋತ್ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯವು ನೂತನ ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು ನೀಡಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸುತ್ತಿರುವುದು ಶ್ಲಾಘನೀಯ ಎಂದರು.
ಕೇ0ದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪ್ರಧಾನಿ ಮೋದಿಯವರು ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಕೃಷಿ ಬಜೆಟ್ ಗಾತ್ರವನ್ನು ಗಣನೀಯವಾಗಿ ಏರಿಸಲಾಗಿದೆ. ಸ್ವಾಮಿನಾಥನ್ ವರದಿಯ ಆಧಾರದಲ್ಲಿ ರೈತರಿಗೆ ಬೆಂಬಲ ಬೆಲೆ ನೀಗದಿಪಡಿಸಲಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಉಪ ರಾಷ್ಟ್ರಪತಿ ಅವರ ಪತ್ನಿ ಡಾ. ಸುದೇಶ ಧನಕರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉಪಸ್ಥಿತರಿದ್ದರು. ಕುಲಪತಿ ಡಾ. ಪಿ.ಎಲ್. ಪಾಟೀಲ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿಗಳು ಇದ್ದರು.