ಜಿಲ್ಲೆ

ಉನ್ನತ ಹುದ್ದೆಗಳಿಗೆ ಬೇಕು ಒಬಿಸಿ ಮೀಸಲು- ವಚನಾನಂದ ಶ್ರೀ ಹೇಳಿಕೆ -ಪಂಚಮಸಾಲಿ ಪ್ರತಿಭಾ ಪುರಸ್ಕಾರ

ದಾವಣಗೆರೆ: ರಾಜ್ಯದ ಸಮಗ್ರ ವೀರಶೈವ ಲಿಂಗಾಯತ ಸಮಾಜಕ್ಕೆ ಕೇಂದ್ರ ಸರ್ಕಾರದ ಒಬಿಸಿ ಮೀಸಲು ಸೌಲಭ್ಯ ಪಡೆಯಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಡೆಸುವ ಹೋರಾಟಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಹರ ಸೇವಾ ಸಂಸ್ಥೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಒಬಿಸಿ ಮೀಸಲಾತಿಯಿದ್ದು, ಕೆಪಿಎಸ್‌ಸಿ ಹುದ್ದೆ ಪಡೆಯಲು ಯಾವುದೇ ತೊಂದರೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ನೀಡದ ಕಾರಣ ಸಮಾಜದ ವಿದ್ಯಾರ್ಥಿಗಳು ಯುಪಿಎಸ್‌ಸಿ ಮೊದಲಾದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದರೂ ಐಎಎಸ್ ಹಾಗೂ ಐಪಿಎಸ್‌ನಂತಹ ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ. ಉನ್ನತ ಹುದ್ದೆ ಪಡೆಯಲು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಅವಶ್ಯಕ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದ ಮಠಾಧೀಶರೆಲ್ಲ ಒಂದಾಗಿ ಸಮಾಜಕ್ಕೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕೊಡಿಸಬೇಕು ಎಂಬ ನಿಲುವು ಹೊಂದಿದ್ದಾರೆ. ಎಲ್ಲ ಮಠಗಳಿಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಸ್ಥಾನವಾಗಿದ್ದು, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಅನೇಕ ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಪ್ರಸ್ತುತ ರಾಜ್ಯದಲ್ಲೂ ಅವರದೇ ಸರ್ಕಾರವಿದೆ. ಕೇಂದ್ರದ ಒಬಿಸಿ ಮೀಸಲಾತಿ ದೊರಕಿಸುವ ನಿಟ್ಟಿನಲ್ಲಿ ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ಜತೆಗಿದ್ದು ಬೆಂಬಲ ನೀಡಲಾಗುವುದು ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವು ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಹಿಂದುಳಿದ ವರ್ಗದ ಆಯೋಗಕ್ಕೆ ವಕೀಲರ ಮೂಲಕ ಒಬಿಸಿ ಮೀಸಲಾತಿಗೆ ಮನವಿ ಸಲ್ಲಿಸುತ್ತಾ ಬರಲಾಗಿದ್ದು, ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೀಸಲಾತಿ ಶಿಫಾರಸ್ಸು ಮಾಡಿ ಕಳುಹಿಸುವಂತೆ ಪತ್ರ ಬರೆದಿದೆ ಎಂದು ತಿಳಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ಸಮಗ್ರ ವೀರಶೈವ ಲಿಂಗಾಯತ ಸಮಾಜಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂಬುದು ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಬೇಡಿಕೆ. ಚುನಾವಣೆಯಲ್ಲಿ ಮೂರು ಪಕ್ಷಗಳಿಂದ ಆಯ್ಕೆಯಾದ ಸಮಾಜದ 74 ಶಾಸಕರಿಗೆ ಮಹಾಸಭಾದಿಂದ ಸನ್ಮಾನ ಕಾರ್ಯಕ್ರಮ ನಡೆಸುವ ಮೂಲಕ ಒಬಿಸಿ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಲು ತಿಳಿಸಲಾಗಿದೆ ಎಂದು ಹೇಳಿದರು.

ವೀರಶೈವ ಮಹಾಸಭಾ ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ಒಳಪಂಗಡ ಮರೆತು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಇದರಿಂದ ಸಮಾಜಕ್ಕೆ ಶಕ್ತಿ ಬರಲಿದೆಯಲ್ಲದೆ ಅಭಿವೃದ್ಧಿ ಸಾಧ್ಯವಾಗಲಿದೆ. ಆದರೆ, ಪ್ರಸ್ತುತ ಸ್ವಾಮೀಜಿಗಳೇ ಒಳಪಂಗಡಗಳ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುತ್ತಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರಿಂದ ಮನೆತನ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.

ವೀರಶೈವ ಸಮಾಜದ ಎಲ್ಲ ಒಳಪಂಗಡದವರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸೌಲಭ್ಯ ದೊರಕಿಸಿದರೆ ಎಲ್ಲರೂ ಒಂದಾಗಲು ಸಾಧ್ಯ. ಮೀಸಲಾತಿಗೆ ಮಹಾಸಭಾ ಜತೆಗೆ ಎಲ್ಲರ ಪ್ರಯತ್ನ ಅಗತ್ಯ ಎಂದರು.

ಸಿದ್ದಗಂಗಾ ಪಿಯು ಕಾಲೇಜ್ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಹಾಗೂ ಎವಿಕೆ ಮಹಿಳಾ ಕಾಲೇಜು ಉಪನ್ಯಾಸಕಿ ಡಾ.ಗೀತಾ ಬಸವರಾಜು ಉಪನ್ಯಾಸ ನೀಡಿದರು. ವಿಜಯನಗರ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಉದ್ಯಮಿಗಳಾದ ಎಸ್.ಕೆ. ಶಶಿಧರ್, ಕಂಚಿಕೇರಿ ಮಹೇಶ್, ಎನ್.ಎಂ. ಕಡೇಕೊಪ್ಪ ರಾಜಣ್ಣ, ಅಂದನೂರು ಆನಂದ, ಎ.ಎಸ್. ರಾಜು ಹಾಗೂ ಡಾ.ಎ.ಕೆ. ರುದ್ರಮುನಿ ಮುಖ್ಯ ಅತಿಥಿಗಳಾಗಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ದಾವಣಗೆರೆ ವಿಶ್ವವಿದ್ಯಾಲಯ ಗಣಿತ ಶಾಸ್ತ್ರ ವಿಭಾಗದ ಪ್ರೊ.ಯು.ಎಸ್. ಮಹಾಬಲೇಶ್, ಡಾ.ಅನುರೂಪ, ಉದ್ಯಮಿ ನಾಗರತ್ನ ಎ.ಜಿ. ಪೂಜಾರ್, ಕೆಎಸ್‌ಇಎಸ್ ಅಬಕಾರಿ ಉಪ ಆಯುಕ್ತೆ ಬಿ.ಎಂ.ಅಶ್ವಿನಿ ಹಾಗೂ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಕೋಟ್..

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಪ್ರಸಕ್ತ ವರ್ಷದಿಂದ ಸಮಾಜದ ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸುವ ಮೂಲಕ ಧಾರ್ಮಿಕ ಸಂಸ್ಕಾರ ನೀಡುವ ಕೆಲಸ ಮಾಡಲಾಗುತ್ತಿದೆ. ಅಂತಹ ಮಕ್ಕಳನ್ನು ಮಠಕ್ಕೆ ಕಳುಹಿಸಿದರೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮದು.

-ಶ್ರೀ ವಚನಾನಂದ ಮಹಾಸ್ವಾಮಿಗಳು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ.

---