ಆಲೂರು: ಶಿಕ್ಷಕರ ಮಾರ್ಗದರ್ಶನ ಮತ್ತು ಪಾಲಕರ ಪ್ರೋತ್ಸಾಹ ಮಕ್ಕಳಿಗೆ ಉನ್ನತ ಸಾಧನೆ ಮಾಡಲು ಶಕ್ತಿ ನೀಡುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಗೂ ಅದಕ್ಕೆ ಕಾರಣರಾದ ಶಿಕ್ಷಕರನ್ನು ಶಾಸಕ ಸಿಮೆಂಟ್ ಮಂಜು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಅವರಿಗೆ ಉತ್ತಮ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವುದು ಅವಶ್ಯ. ಮುಂದಿನ ದಿನಗಳಲ್ಲಿ ತಾಲೂಕಿನ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದರ ಜತೆಗೆ ಮುಂದಿನ ಭವಿಷ್ಯದಲ್ಲಿ ಅವರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಈ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಅವರಿಗೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ಶಿಕ್ಷಕರ ಕಾರ್ಯವೈಖರಿ ಎಲ್ಲರಿಗೂ ಮಾದರಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿದ್ದರಿಂದ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಆಲೂರು ತಾಲೂಕು ಎರಡನೇ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಕಾರಣರಾದ ಶಿಕ್ಷಕರನ್ನು ಗುರುತಿಸಿ ಗೌರವಿಸುವುದರಿಂದ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಶರ್ಮಾ, ಕಲೀಬೀರ್ ಪ್ರೌಢಶಾಲೆ ಮುಖ್ಯಶಿಕ್ಷಕ ವಾಸುದೇವ್, ಬಿಜೆಪಿ ಅಧ್ಯಕ್ಷೆ ಉಮಾ, ರವಿಪ್ರಕಾಶ್, ತಾಲೂಕು ವೀರಶೈವ ಅಧ್ಯಕ್ಷ ರೇಣುಕಾ ಪ್ರಸಾದ್, ತಾಲೂಕು ನೌಕರರ ಸಂಘದ ಅಧ್ಯಕ್ಷ ವರದರಾಜ, ದೈಹಿಕ ಪರಿವೀಕ್ಷಕ ಶಿಕ್ಷಕ ಗೋವಿಂದರಾಜು, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.