ಜಿಲ್ಲೆ

ಉನ್ನತ ಶಿಕ್ಷಣದಲ್ಲೂ ಕೆಂಪೇಗೌಡರ ಪಠ್ಯವಿರಲಿ

ರೇಷ್ಮೆ ನಗರ ಡೆಸ್ಕ್

ವಿಜಯವಾಣಿ ಸುದ್ದಿಜಾಲ ಮಾಗಡಿ

ನಾಡ ಪ್ರಭು ಶ್ರೀ ಕೆಂಪೇಗೌಡರ ಜಾತ್ಯತೀತ ನಡೆ ಇಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕಿದ್ದು, ಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯವಾಗಿ ಬೋಧಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕಿನ ತಾವರೆಕೆರೆ-ಮಾಗಡಿ ರಸ್ತೆಯಲ್ಲಿ ಭಾನುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕೇವಲ ಸಾಮಂತರಷ್ಟೇ ಅಲ್ಲದೆ ಮಹಾಪ್ರಭುಗಳಾಗಿದ್ದರು. ನಾಡಪ್ರಭು ಕೆಂಪೇಗೌಡರು ಕೇವಲ ಸಾಮಂತರಷ್ಟೇ ಅಲ್ಲದೆ ಮಹಾಪ್ರಭುಗಳಾಗಿದ್ದರು. ಮಹಾಪ್ರಭುವಿಗೆ ಇರಬೇಕಾದ ಸರ್ವರ ಅಭಿವೃದ್ಧಿ ಲಕ್ಷಣಗಳು ಅವರಲ್ಲಿ ಇದ್ದವು. ನಾಡಿನ ಜನತೆಯ ಅಭಿವೃದ್ಧಿಗೆ ಪೂರಕವಾಗಿ ಕೆರೆ-ಕಟ್ಟೆ, ದೇಗುಲ, ಕೋಟೆಗಳ ನಿರ್ಮಾಣದ ಜತೆಗೆ ಸರ್ವ ಜನಾಂಗವನ್ನು ಸಮವಾಗಿ ಕಾಣುವ ವ್ಯಾಪಾರ ವಹಿವಾಟಿಗಳಿಗೆ ಪೂರಕವಾದ ಅಕ್ಕಿಪೇಟೆ, ಚಿಕ್ಕಪೇಟೆ, ಕುಂಬಾರಪೇಟೆ, ಮಡಿವಾರಳ ಪೇಟೆ, ಮಾಮೂಲ್ ಪೇಟೆ ಸೇರಿ ಹಲವು ಪೇಟೆಗಳನ್ನೂ ನಿರ್ಮಿಸಿದ ಕೆಂಪೇಗೌಡರು, ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟದಂತೆ ಕಟ್ಟಿದ್ದಾರೆ. ಇದೇ ಕಾರಣದಿಂದ ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಮಂದಿಗೆ ಬೆಂಗಳೂರು ಆಶ್ರಯತಾಣವಾಗಿದೆ. ವಿಶ್ವಕ್ಕೆ ಮಾದರಿಯಾಗಿ ನಿಂತಿದೆ ಎಂದರು.

ಕೆಂಪೇಗೌಡರು ಕಟ್ಟ ಬಯಸಿದ ಸಮಾಜಕ್ಕೆ ತಾವರೆಕೆರೆ ಗ್ರಾಮ ಪೂರಕವಾಗಿದೆ. ಎಲ್ಲ ಸಮುದಾಯ, ಧರ್ಮ, ಭಾಷಿಕರು ಗ್ರಾಮದಲ್ಲಿ ಒಟ್ಟಾಗಿ ಬಾಳಿ ಬದುಕುವ ಮೂಲಕ ಎಲ್ಲ ಕಾರ್ಯಕ್ರಮಗಳನ್ನು ಸಾಮರಸ್ಯದಿಂದ ಆಯೋಜಿಸುತ್ತಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ತಾವರೆಕೆರೆಯಲ್ಲಿ ನಾಡ ಪ್ರಭು ಕೆಂಪೇಗೌಡರ ಬೃಹತ್ ಪುತ್ಥಳಿ ಸ್ಥಾಪನೆಗೂ ಕ್ರಮವಹಿಸಬೇಕು ಎಂದರು.

ತಾವರೆಕೆರೆ ಕಾಳಪ್ಪಸ್ವಾಮಿ ಮಠದ ರೇವಣಸಿದ್ದಯ್ಯ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ಕೆಂಪೇಗೌಡ, ಮುಖಂಡರಾದ ಟಿ.ಎಲ್.ಚಂದ್ರಶೇಖರ್, ಶಂಕರೇಗೌಡ, ಟಿ.ಎ.ಮೂರ್ತಿ, ಗಂಗನರಸಯ್ಯ, ಲಕ್ಷ್ಮೀಶ್ ಗೌಡ, ವೆಂಕಟೇಶ್, ಎಸ್.ಎಲ್.ಎನ್.ನವೀನ್, ಕಾಂತರಾಜು ಇದ್ದರು.

ಭಾವಚಿತ್ರ ಕಡ್ಡಾಯವಾಗಲಿ : ಇಂತಹ ಮಹಾನ್ ಚೇತನ ಮತ್ತು ಆದರ್ಶ ಪ್ರಭುವಿನ ಬಗ್ಗೆ, ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ. ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಮಾರ್ಗದರ್ಶನ ಮಾಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಬಗ್ಗೆ ಪ್ರಾಥಮಿಕ ಶಾಲಾ ಮಟ್ಟದಿಂದ ಉನ್ನತ ಶಿಕ್ಷಣದವರೆಗಿನ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಹಾಗಾಗಿ ಸರ್ಕಾರ ಕೂಡಲೇ ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಕೆಂಪೇಗೌಡರ ಜೀವನ, ಸಾಧನೆ ಮತ್ತು ಕೊಡುಗೆಗಳನ್ನು ತಿಳಿಸುವ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಜತೆಗೆ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕೆಂಪೇಗೌಡರ ಭಾವಚಿತ್ರ ಇಡಬೇಕು ಎಂದು ನಂಜಾವಧೂತ ಶ್ರೀಗಳು ಒತ್ತಾಯಿಸಿದರು.

ನಾಡಪ್ರಭು ಕೊಡುಗೆ ಅಪಾರ : ರಂಗಕರ್ಮಿ ಅಕ್ಷರ ಚಿಕ್ಕವೀರಯ್ಯ ಮಾತನಾಡಿ, ಸಣ್ಣ ಪಟ್ಟಣದಂತಿದ್ದ ಬೆಂಗಳೂರು ಇಂದು ವಿಶ್ವಪ್ರಸಿದ್ಧ ಮಹಾನಗರವಾಗಿರುವಲ್ಲಿ ಕೆಂಪೇಗೌಡರ ಕೊಡುಗೆ ಅಪಾರ. ದಾರ್ಶನಿಕ, ದಕ್ಷ ಆಡಳಿತ ಗಾರರಾಗಿದ್ದ ಕೆಂಪೇಗೌಡರು ಬದುಕು ಪ್ರದರ್ಶನಕ್ಕಾಗಿ ಅಲ್ಲ, ನಿದರ್ಶನಕ್ಕಾಗಿ, ವಿಲಾಸಕ್ಕಲ್ಲ, ವಿಕಾಸಕ್ಕಾಗಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಸ್ಫೂರ್ತಿಯುತ ಜೀವನ ಸಾಧನೆಯನ್ನು ಇಂದು ಎಲ್ಲರೂ ಅರಿಯಬೇಕು. ಅವರ ಮಾರ್ಗದಲ್ಲೇ ಮುನ್ನಡೆಯಬೇಕು ಎಂದರು.