ಜಿಲ್ಲೆ

ಉನ್ನತ ಶಿಕ್ಷಣಕ್ಕೆ ದೊರೆಯದ ಪ್ರಾಮುಖ್ಯತೆ : ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ವಿಷಾಧ

ಮೈಸೂರು: ಶಾಲಾ ಶಿಕ್ಷಣಕ್ಕೆ ನೀಡುವಷ್ಟು ಒತ್ತನ್ನು ವಿದ್ಯಾರ್ಥಿಗಳು, ಪಾಲಕರು ಉನ್ನತ ಶಿಕ್ಷಣಕ್ಕೆ ನೀಡುತ್ತಿಲ್ಲ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ವಿಷಾಧ ವ್ಯಕ್ತಪಡಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಠ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ 10 ದಿನಗಳ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಪ್ರತಿ ವರ್ಷ 25 ಕೋಟಿ ವಿದ್ಯಾರ್ಥಿಗಳು ಶಾಲೆಗೆ ಸೇರುತ್ತಿದ್ದಾರೆ. ಆದರೆ, ಇದರಲ್ಲಿ ನಾಲ್ಕು ಕೋಟಿ ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ಸೇರುತ್ತಿದ್ದಾರೆ. ಇದನ್ನು ನೋಡಿದರೆ ಉನ್ನತ ಶಿಕ್ಷಣಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ಪದವಿ ಪಡೆಯುವ ನಾಮಕಾವಸ್ತೆ ಶಿಕ್ಷಣ ಇಂದು ಯಾರಿಗೂ ಬೇಕಾಗಿಲ್ಲ. ಕೌಶಲವಿರುವ ಶಿಕ್ಷಣದ ಅಗತ್ಯವಿದೆ. ಪ್ರತಿವರ್ಷ ವಿಶ್ವವಿದ್ಯಾಲಯಗಳಲ್ಲಿ ಲಕ್ಷಾಂತರ ಜನ ಪದವಿ ಪಡೆದು ಹೊರಬರುತ್ತಿದ್ದಾರೆ. ಆದರೆ, ಕೈಗಾರಿಕೆಗಳಲ್ಲಿ ಕೌಶಲ ಇರುವ ಜನ ಸಿಗುತ್ತಿಲ್ಲ ಎನ್ನುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ಹೆಚ್ಚಾಗಿ ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಚಾಮರಾಜನಗರದಿಂದ ಪ್ರತಿದಿನ 4ರಿಂದ 5 ಸಾವಿರ ಜನ ಕೂಲಿ ಕೆಲಸಕ್ಕೆ ಬೆಂಗಳೂರು, ಮೈಸೂರಿಗೆ ಹೋಗುತ್ತಿದ್ದಾರೆ. ಇಂತಹವರ ಮಕ್ಕಳನ್ನು ಗುರುತಿಸಿ ಶಿಕ್ಷಣದ ಜತೆಗೆ ಕೌಶಲ ತರಬೇತಿ ನೀಡಬೇಕು. ಇದರಿಂದ ಪೋಷಕರು, ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದರು.

ಸಂಶೋಧನಾ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ರಮಣಯ್ಯ ಮಾತನಾಡಿ, ಸಂಶೋಧನೆ ಜನರಿಗೆ ಮತ್ತು ಸಮಾಜಕ್ಕೆ ಉಪಯೋಗವಾಗುವ ಸಂಶೋಧನೆಯಾಗಿರಬೇಕು. ನಿಮ್ಮ ಸಂಶೋಧನೆ ಪಾಠಪ್ರವಚನಗಳಿಗೆ ಉಪಯೋಗವಾಗಬೇಕು. ನೀವು ಪಾಠ ಮಾಡುವಾಗ ಸಾಕ್ಷ್ಯಾಧಾರಿತ ಪಾಠ ಮಾಡಿದರೆ ಉತ್ತಮ ಶಿಕ್ಷಕರಾಗಬಹುದು. ನಿಮ್ಮ ಸಂಶೋಧನೆ ಗುಣಮಟ್ಟದಿಂದ ಕೂಡಿರಲಿ ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್, ಸಂಶೋಧನಾಕಾರಿ ಕೆ. ಶ್ರೀನಿವಾಸ್, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಶೌಕತ್ ಅಜೀಮ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೋಹನ್, ಅರುಣ್‌ಪ್ರಭು, ಮಂಜುನಾಥ್, ಭವ್ಯಾ ಬಿ.ಆರ್., ಗುಣಧರ್, ಹೇಮಚಂದ್ರ, ದಾಕ್ಷಾಯಿಣಿ ಎಂ.ಆರ್., ಪುಷ್ಪಲತಾ, ಮಮತಾ ಆರ್., ವೆಂಕಟೇಶ ಪ್ರಸಾದ್ ಇದ್ದರು.

-------------