ಜಿಲ್ಲೆ

ಉನ್ನತ ಶಿಕ್ಷಣ ಅಕಾಡೆಮಿ ಕಟ್ಟಡ ಕಾಮಗಾರಿ ಪರಿಶೀಲನೆ

ಧಾರವಾಡ: ಇಲ್ಲಿನ ಹೊಯ್ಸಳನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಜಾಗದಲ್ಲಿ ನಿರ್ವಿುಸಲಾಗುತ್ತಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶಾಸಕ ಅರವಿಂದ ಬೆಲ್ಲದ, ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಅಕಾಡೆಮಿಯ ಆಡಳಿತ ಭವನ, ಹಾಸ್ಟೆಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕ್ಯಾಂಟೀನ್, ಸ್ಟಾಫ್ ಕ್ವಾಟರ್ಸ್ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಶಾಸಕ ಬೆಲ್ಲದ ಪರಿಶೀಲಿಸಿದರು. ಕಾಮಗಾರಿ ಕಳಪೆಯಾಗದಂತೆ ಕಾರ್ಯ ನಿರ್ವಹಿಸಬೇಕು. ಈಗಾಗಲೇ ವಿಳಂಬವಾಗಿದ್ದು, ನಿಗದಿತ ಅವಧಿಗೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಈ ವೇಳೆ ಶಾಸಕ ಅರವಿಂದ ಬೆಲ್ಲದ ಸುದ್ದಿಗಾರರೊಂದಿಗೆ ಮಾತನಾಡಿ, ಇದು ದೇಶದಲ್ಲೇ ವಿಶಿಷ್ಟ ಸಂಸ್ಥೆ. ಶಾಲಾ ಶಿಕ್ಷಕಕರಾಗುವವರಿಗೆ ಬಿ.ಇಡಿ, ಎಂ.ಇಡಿಯಲ್ಲಿ ತರಬೇತಿ ಸಿಗುತ್ತದೆ. ಆದರೆ ಕಾಲೇಜು ಉಪನ್ಯಾಸಕರು, ಸಹಾಯಕ ಮತ್ತು ಸಹ ಪ್ರಾಧ್ಯಾಪಕರಿಗೆ ತಮ್ಮ ವಿಷಯ ಬಿಟ್ಟು ಬೇರೆ ವಿಷಯಗಳ ಸಮಗ್ರ ತರಬೇತಿ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಉನ್ನತ ಶಿಕ್ಷಣ ಸಚಿವರೊಂದಿಗೆ ರ್ಚಚಿಸಿ 2014ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಮುಂದಿನ ಬಜೆಟ್​ನಲ್ಲಿ ಪ್ರಸ್ತಾವನೆ ಸ್ವೀಕಾರ ಆಯಿತು ಎಂದರು.

ಅಕಾಡೆಮಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ 27 ಎಕರೆ ಜಾಗ ನೀಡಿದೆ. ಹೊಸ ಕ್ಯಾಂಪಸ್ ನಿರ್ವಣಕ್ಕೆ 90 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 70 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಧಾರವಾಡದಲ್ಲಿ ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವುಗಳಿಂದ ಉನ್ನತ ಶಿಕ್ಷಣ ಅಕಾಡೆಮಿ ಉತ್ತಮ ಕಾರ್ಯ ನಿರ್ವಹಿಸಲಿದೆ ಎಂಬ ವಿಶ್ವಾಸವಿದೆ. ಈ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಗೆ ಧಾರವಾಡದ ಈ ಅಕಾಡೆಮಿ ದಿಕ್ಸೂಚಿಯಾಗುವ ಭರವಸೆ ಇದೆ ಎಂದರು.

ಕಟ್ಟಡ ನಿರ್ಮಾಣ ಕಾಮಗಾರಿ ಕೋವಿಡ್, ಮಳೆಗಾಲದಿಂದ ವಿಳಂಬವಾಗಿದೆ. ಇನ್ನೊಂದು ವರ್ಷದಲ್ಲಿ ಸುಸಜ್ಜಿತ ಕ್ಯಾಂಪಸ್ ಕಾರ್ಯನಿರ್ವಹಿಸಲಿದೆ. ಕವಿವಿಯ ತಾತ್ಕಾಲಿಕ ಕ್ಯಾಂಪಸ್​ನಲ್ಲಿ ಸದ್ಯ ನಡೆಯುತ್ತಿರುವ ಅಕಾಡೆಮಿಯು ನಿರ್ದೇಶಕ ಡಾ. ಶಿವಪ್ರಸಾದ್ ನೇತೃತ್ವದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಕಾಡೆಮಿ ನಿರ್ದೇಶಕ ಡಾ. ಶಿವಪ್ರಸಾದ್, ಗುತ್ತಿಗೆದಾರರು ಉಪಸ್ಥಿತರಿದ್ದರು.

ವಿವಿಗಳು ಬಿಳಿ ಆನೆಗಳಂತಾಗಿವೆ
ವಿಶ್ವವಿದ್ಯಾಲಯಗಳ ಬಿಳಿ ಆನೆಗಳಂತಾಗಿವೆ. ಸದ್ಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಕೆಲ ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ಕುಲಪತಿ ಪ್ರೊ. ಗುಡಸಿ ಅವರಿಗೆ ನೇಮಕಾತಿಗೆ ಕೈ ಹಾಕದಂತೆ ತಿಳಿಸಿದ್ದೇನೆ. ಬೋಧಕ- ಬೋಧಕೇತರ ಸಿಬ್ಬಂದಿಯ ಅಗತ್ಯತೆಯನ್ನು ಸಿಂಹಾವಲೋಕನ ಮಾಡುವಂತೆ ಸೂಚಿಸಿದ್ದೇನೆ ಎಂದು ಶಾಸಕ ಬೆಲ್ಲದ ಪ್ರತಿಕ್ರಿಯಿಸಿದರು.

ವಿಸಿಗಳನ್ನು ನೇಮಕಾತಿಯಿಂದ ಹೊರಗಿಡಿ
ನೇಮಕಾತಿ ಮತ್ತು ಕಟ್ಟಡ ನಿರ್ವಣ, ದುರಸ್ತಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಹಾಗಾಗಿ ಕುಲಪತಿ ಮತ್ತು ಕುಲಸಚಿವರನ್ನು ಈ ಪ್ರಕ್ರಿಯೆಗಳಿಂದ ಹೊರಗಿಡಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಬೆಲ್ಲದ ತಿಳಿಸಿದರು. ಕೋವಿಡ್ ಮಧ್ಯೆಯೂ ಮದುವೆ, ಸಮಾರಂಭಗಳು ನಡೆಯುತ್ತಿವೆ. ಹಾಗಾಗಿ ಶಾಲೆಗಳು ಆರಂಭವಾಗಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.