ಜಿಲ್ಲೆ

ಉನ್ನತ ಗ್ರಾಮ ಅಭಿಯಾನಕ್ಕೆ 87 ಹಳ್ಳಿ ಆಯ್ಕೆ

ಚಿತ್ರದುರ್ಗ: ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಆಯ್ಕೆಯಾದ ಪರಿಶಿಷ್ಟ ವರ್ಗ ಜನರು ಹೆಚ್ಚಿರುವ ಜಿಲ್ಲೆಯ ಆಯ್ದ 87 ಗ್ರಾಮಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳು ಮೀಸಲಿರಿಸಿದ 79,156 ಕೋಟಿ ರೂ. ಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63 ಸಾವಿರ ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಕೇಂದ್ರ ಬುಡಕಟ್ಟು ಮಂತ್ರಾಲಯ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ. ದೇಶದ ಅಂದಾಜು 5 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ. 2024-25ರಿಂದ 2028-29ನೇ ಸಾಲಿನವರೆಗೆ ಯೋಜನೆ ಪೂರ್ಣಗೊಳಿಸಲಾಗುವುದು. 2024-25ರಿಂದ 2025-26ನೇ ಸಾಲಿಗೆ ಮೊದಲ ಹಂತದಲ್ಲಿ 4 ಸಾವಿರ ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ.
ಜಿಲ್ಲೆಯ 87 ಗ್ರಾಮಗಳಲ್ಲಿ 17 ವಿವಿಧ ಇಲಾಖೆಗಳಡಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಪಕ್ಕಾ ಮನೆ, ರಸ್ತೆ, ಕುಡಿವ ನೀರು, ಮನೆಗಳ ವಿದ್ಯುದ್ಧೀಕರಣ, ಹೊಸ ಸೌರ ವಿದ್ಯುತ್ ಯೋಜನೆ, ಸಂಚಾರಿ ವೈದ್ಯಕೀಯ ಘಟಕಗಳು, ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ಮಾನ್ ಕಾರ್ಡ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಎಲ್‌ಪಿಜಿ ಸಂಪರ್ಕ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಪೋಷಣ್ ಅಭಿಯಾನ್, ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಸ್ಕಿಲ್ ಇಂಡಿಯಾ, ಡಿಜಿಟಲ್ ಇನಿಶಿಯೇಟಿವ್ಸ್, ಸುಸ್ಥಿರ ಕೃಷಿ ಉತ್ತೇಜನ, ಮೀನು ಸಂಸ್ಕೃತಿ ಬೆಂಬಲ, ಜಾನುವಾರು ಪಾಲನೆ, ಸಾಮರ್ಥ್ಯ ಕಟ್ಟಡ, ಟ್ರೈಬಲ್ ಹೋಂ ಸ್ಟೇಸ್, ಸ್ವದೇಶ್ ದರ್ಶನ, ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಇತ್ಯಾದಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ.
ಜಿಲ್ಲೆಯಲ್ಲಿ 100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲ ಸೌಕರ್ಯಗಳ ಸುಧಾರಣೆ, ಕೌನ್ಸೆಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ-2006 ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾನಿಧಿಗಳು ಉತ್ಪನ್ನ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ಅವಕಾಶ ಕಲ್ಪಿಸಲಾಗುತ್ತಿದ್ದು, ಈ ಗ್ರಾಮಗಳ ಬುಡಕಟ್ಟು ಸಮುದಾಯದವರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.