ಮಂಡ್ಯ: ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ರೂಪಿಸಬೇಕು ಎಂದು ರೈತಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಸಿಲ್ವರ್‌ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರೈತ ಸಮುದಾಯದ ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣುಮಕ್ಕಳು ಸಿಗುತ್ತಿಲ್ಲ. ಅನ್ನದಾತರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಗಾರ ಸರ್ಕಾರಗಳಿಂದ ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲೆಯಲ್ಲಿಯೇ ಪ್ರಥಮಭಾರಿಗೆ ವಿಶ್ವ ರೈತ ದಿನ ಆಚರಿಸಿ, ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಿದ್ಧೇವೆ. ರೈತರ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಬಾರದಿರುವುದು ಶೋಚನೀಯ. ರೈತರ ಸಮಸ್ಯೆಗಳನ್ನು ಬಗೆಯರಿಸುವುದು ಮತ್ತು ರೈತರಿಗೆ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿಯಾದರೂ ಜನಪ್ರತಿನಿಧಿಗಳು ಭಾಗಿಯಾಗದಿರುವುದು ನೋವುತರುತ್ತದೆ ಎಂದು ವಿಷಾದಿಸಿದರು.
ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ಈಗಾಗಲೇ ಭತ್ತ ಕಟಾವು ಮುಗಿದಿದ್ದು, ಭತ್ತ ಖರೀದಿ ಮಾಡಿ ಸೂಕ್ತ ಬೆಲೆ ಕೊಡಬೇಕು, ರಸಗೊಬ್ಬರಗಳ ದರ ದುಬಾರಿಯಾಗಿದ್ದು, ಕಡಿಮೆ ಬೆಲೆಯಲ್ಲಿ ವಿತರಿಸಬೇಕು, ರೈತರಿಗೆ ಉಚಿತ ಆರೋಗ್ಯ ವಿಮೆ ಮಾಡಿಸಬೇಕು. ರಾಷ್ಟ್ರೀಯ, ಜಿಲ್ಲಾ, ಸಹಕಾರ, ಪತ್ತಿನ ಬ್ಯಾಂಕ್‌ಗಳಲ್ಲಿರುವ ಬೆಳೆ ಹಾಗೂ ಖಾಸಗಿ ಸಾಲನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಕಾಳೇನಹಳ್ಳಿ ಮಾತನಾಡಿದರು. ಸವಳಂದ ಮಲ್ಲೇಶ್ವರ ಗುರುಮಠದ ಪೀಠಾಧ್ಯಕ್ಷೆ ಮಹಾಮಾತೆ ಅಕ್ಕಮಹಾದೇವಿ, ವಕೀಲರಾದ ಅರುಣ್, ಶಿವಕುಮಾರ್, ರಾಜ್ಯ ಉಪಾಧ್ಯಕ್ಷ ಮುನಿಯಪ್ಪ ಹೆಬ್ರಿ, ಮಂಜುನಾಥ್, ಮುದ್ದುಕೃಷ್ಣ, ಉದ್ಯಮಿ ಜಗನ್ನಾಥಶೆಟ್ಟಿ, ಸಿದ್ದಪ್ಪ ಹೆಮ್ಮಿಗೆ, ರಮೇಶ್, ಅಂಕರಾಜು ಇತರರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಳಿಕಾಂಭ ದೇವಾಲಯದ ಆವರಣದಿಂದ ಹಳ್ಳಿಕಾರ್ ರಾಸುಗಳನ್ನು ಮೆರವಣಿಗೆ ಮಾಡಲಾಯಿತು. ಉತ್ತಮ ರಾಸುಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.