ಚಾಮರಾಜನಗರ: ರಾಜ್ಯ ಸರ್ಕಾರ ಸೆ.4 ರಂದು ನಡೆದ ಸಚಿವ ಸಂಪುಟದಲ್ಲಿ ಆಕ್ಸಿಜನ್ ಸಂತ್ರಸ್ತರಲ್ಲಿ 21 ಜನರಿಗೆ ಸರ್ಕಾರಿ ಉದ್ಯೋಗವನ್ನು ನೀಡುವಂತೆ ತೀರ್ಮಾನಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿ ಅವರ ಹೆಸರನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಹಲವಾರು ಮುಖಂಡರು ಮಾತನಾಡಿ, ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರಲ್ಲಿ 21 ಜನರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ತೀರ್ಮಾನಿಸಿದ್ದು, ಈ ಕುರಿತು ಶೀಘ್ರದಲ್ಲೇ ನೋಟಿಫಿಕೇಶನ್ ಹೊರಡಿಸಬೇಕು. ಉಳಿದವರಿಗೂ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಆಕ್ಸಿಜನ್ ದುರಂತಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಅದರಂತೆ ಸಂತ್ರಸ್ತರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಉದ್ಯೋಗ ನೀಡುವಲ್ಲಿ ಶ್ರಮವಹಿಸಿದ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಬೇಕು ಒಮ್ಮತದ ನಿರ್ಣಯವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮ್ಮದ್ ಮಾತನಾಡಿ, ರಾಜ್ಯ ಸರ್ಕಾರ ಸೆ.4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 60 ಕ್ಕಿಂತಲೂ ಹೆಚ್ಚು ವಿಚಾರಗಳನ್ನು ಚರ್ಚಿಸಿದೆ. ಅದರಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತರದಲ್ಲಿ ಮೃತಪಟ್ಟ ಅರ್ಹ ಅವಲಂಬಿತ ಲಾನುಭವಿಗಳಿಗೆ ಉದ್ಯೋಗ ನೀಡುವ ವಿಚಾರವನ್ನು ಚರ್ಚಿಸಿದೆ. ಅದರಲ್ಲಿ ಹೆಚ್ಚಿನ ವಿಚಾರಗಳಿಗೆ ಸ್ಪಷ್ಟನೆಯನ್ನು ನೀಡಿದೆ. ಆದರೆ ಸಂತ್ರಸ್ತರಿಗೆ ಉದ್ಯೋಗ ನೀಡಿರುವ ಕುರಿತು ಸ್ಪಷ್ಟನೆಯನ್ನು ನೀಡಿಲ್ಲ. ಆಗಾಗಿ ನಮಗೆ ಇಂದಿಗೂ ಅನುಮಾನ ಕಾಡುತ್ತಿದ್ದು, ಈ ಕುರಿತು ಸರ್ಕಾರ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.
ಆಕ್ಸಿಜನ್ ಸಂತ್ರಸ್ತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಇವರ ಹೋರಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವಾರು ಜನರು ಸಹಕಾರವನ್ನು ನೀಡಿದ್ದಾರೆ. ಅದರಲ್ಲೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸಂತ್ರಸ್ತರ ಪರವಾಗಿ ಸದನದಲ್ಲಿ ನಿರಂತರವಾಗಿ ಧ್ವನಿ ಎತ್ತು ಮೂಲಕ ಸಂತ್ರಸ್ತರ ಪರವಾಗಿ ನಿಂತಿದ್ದಾರೆ. ಆದಷ್ಟು ಬೇಗ ಸಂತ್ರಸ್ತರ ನೋವುಗಳಿಗೆ ಪರಿಹಾರ ದೊರೆಯಲಿ ಎಂದರು.
ಸಭೆಯಲ್ಲಿ ಕನ್ನಡಪರ ಹೋರಾಟಗಾರ ಪಣ್ಯದಹುಂಡಿ ರಾಜು, ಹೋರಾಟಗಾರ ಸಂಘಸೇನಾ, ಸಿದ್ದರಾಜು, ದಸಂಸ ನಾಗಶೇಖರ, ರವಿಚಂದ್ರಪ್ರಸಾದ್ ಕಹಳೆ, ಮುರುಗೇಶ್ ಹಾಗೂ ಸಂತ್ರಸ್ತರು ಹಾಜರಿದ್ದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು:
ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಆಕ್ಸಿಜನ್ ಸಂತ್ರಸ್ತರಲ್ಲಿ 21 ಜನರಿಗೆ ಉದ್ಯೋಗವನ್ನು ನೀಡಿದ್ದು, ಉಳಿದವರಿಗೂ ಉದ್ಯೋಗ ನೀಡುವ ಕುರಿತು ಸ್ಪಷ್ಟನೆ ನೀಡಬೇಕು. ಬಹುಮುಖ್ಯವಾಗಿ ಆಕ್ಸಿಜನ್ ದುರಂತದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಹೋರಾಟವನ್ನು ರೂಪಿಸಬೇಕಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮವಹಿಸಲಾಯಿತು. ಆದರೆ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಈ ವರೆಗೂ ಅಧಿಕಾರಿಗಳ ವಿರುದ್ಧ ಕ್ರಮವಾಗಿಲ್ಲ. ಪ್ರಕರಣದ ತನಿಖೆ ನಡೆಸುತ್ತಿರುವ ಆಯೋಗ ಆದಷ್ಟು ಬೇಗ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಹೋರಾಟಗಾರ ಜತೆ ಸಂತ್ರಸ್ತರು ನಿರಂತರವಾಗಿ ಕೈಜೋಡಿಸಬೇಕು ಎಂದು ತಿಳಿಸಿದರು.
ಎಆರ್‌ಕೆ ಧ್ವನಿಗೆ ಮೆಚ್ಚುಗೆ:
ಸಂತ್ರಸ್ತರ ಪರವಾಗಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನಿರಂತರವಾಗಿ ಧ್ವನಿ ಎತ್ತಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಸಭೆಯಲ್ಲಿ ವ್ಯಕ್ತವಾಯಿತು. ಎಆರ್‌ಕೆ ಅವರು ಶಾಸಕರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ತಮ್ಮ ಕ್ಷೇತ್ರದ ವ್ಯಾಪ್ತಿಯ ಸಂತ್ರಸ್ತರೊಬ್ಬರಿಗೆ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗವನ್ನು ದೊರಕಿಸಿಕೊಟ್ಟರು. ಅದಲ್ಲದೇ ಸದನದಲ್ಲಿ ಸಂತ್ರಸ್ತರ ಪರವಾಗಿ ಹಲವಾರು ಬಾರಿ ಧ್ವನಿಯೆತ್ತಿದ್ದರು. ಆಗಾಗಿ ಶಾಸಕ ಎಆರ್‌ಕೆ ಅವರನ್ನು ಭೇಟಿ ನೀಡಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅವರಲ್ಲದೇ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಸನ್ಮಾನಿಸುವಂತೆ ಹೋರಾಟಗಾರರು ನಿರ್ಧರಿಸಿದರು.
ಈ ಆರ್ಥಿಕ ವರ್ಷದಲ್ಲೇ 21 ಜನ ಸಂತ್ರಸ್ತರಿಗೂ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಬೇಕಿದೆ. ಅದರಲ್ಲೂ ಉಳಿದವರಿಗೂ ಉದ್ಯೋಗವನ್ನು ನೀಡುವಂತೆ ನಿರಂತರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಬೇಕಿದೆ.
-ಕೆ.ವೆಂಕಟರಾಜು, ಹಿರಿಯ ಹೋರಾಟಗಾರ, ಚಾಮರಾಜನಗರ
ಆಕ್ಸಿಜನ್ ಸಂತ್ರಸ್ತರ ಪರವಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನಿರಂತರವಾಗಿ ಧ್ವನಿಯೆತ್ತಿದ್ದಾರೆ. ಹಲವಾರು ಸಭೆಗಳಲ್ಲಿ ಮತ್ತು ಸದನದಲ್ಲೂ ಚರ್ಚಿಸುವ ಮೂಲಕ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
-ಎಂ.ಮಹೇಶ್, ಎಸ್‌ಡಿಪಿಐ ಮುಖಂಡ, ಚಾಮರಾಜನಗರ
ಸಚಿವ ಸಂಪುಟ ಸಭೆಯಲ್ಲಿ 21 ಸಂತ್ರಸ್ತರಿಗೆ ಉದ್ಯೋಗ ನೀಡುವಂತೆ ನಿರ್ಧರಿಸಲಾಗಿದೆ. ಸಂಪುಟ ಸಭೆಯಲ್ಲಿ ತೀರ್ಮಾನವಾದ ನಂತರ ಕೆಲವು ಸಮಯವಾಗುತ್ತದೆ. ಸರ್ಕಾರದಿಂದ ಆದೇಶ ಬಂದ ಬಳಿಕ ಸಂತ್ರಸ್ತರೊಂದಿಗೆ ಸಭೆ ನಡೆಸಿ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು. ಉಳಿದವರಿಗೂ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅವರ ಪರವಾಗಿ ಇರಲಿದೆ.
-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ