ಜಿಲ್ಲೆ

ಉದ್ಯೋಗ ಮೇಳದಲ್ಲಿ  86 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

ಮೈಸೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆದ 86 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶುಕ್ರವಾರ ವಿತರಿಸಲಾಯಿತು.

ದೇಶದ 40 ಸ್ಥಳಗಳಲ್ಲಿ ಆಯೋಜಿಸಿದ್ದ 17ನೇ ರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದರು. ನಂತರ ಮೈಸೂರು ವಿಭಾಗದಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಯಿತು.

ಅಂಚೆ ಇಲಾಖೆಯ ರಾಜ್ಯ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಮಾತನಾಡಿ, ಯಾವುದೇ ಹುದ್ದೆಯಾದರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಉನ್ನತ ಹುದ್ದೆಗಳಿಗೆ ಏರಲು ಅಗತ್ಯ ಕೌಶಲ ಪಡೆದುಕೊಳ್ಳಬೇಕು ಎಂದರು.

ತರಬೇತಿ ಬಹಳ ಮುಖ್ಯ. ಇಲಾಖಾ ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವ್ಯಕ್ತಿಯಾಗಿ ಅಲ್ಲ, ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಾರ್ವಜನಿಕರು ಉತ್ತಮ ಸೇವೆಯನ್ನೇ ನಿರೀಕ್ಷೆ ಮಾಡುತ್ತಾರೆ. ಅವರ ಕೆಲಸವನ್ನು ಮಾಡುವುದು ದೇವರ ಕೆಲಸವೇ. ಅದರಿಂದ ಹುದ್ದೆಗೂ ಘನತೆ, ಗೌರವಗಳು ದೊರೆಯುತ್ತದೆ ಎಂದರು.

ಆಯಿಷ್ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರಿ ಸಂಸ್ಥೆಗಳು ನಡೆಯುತ್ತಿವೆ ಎಂಬುದನ್ನು ಸರ್ಕಾರಿ ನೌಕರರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕಾನೂನು ಚೌಕಟ್ಟಿನ ಒಳಗೆ ಕರ್ತವ್ಯ ನಿರ್ವಹಣೆ ಮಾಡಬೇಕು. ಪ್ರಾಮಾಣಿಕತೆಯ ಸೇವಾ ಮನೋಭಾವ ಇದ್ದರೆ ಮಾನವೀಯ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.

ರೈಲ್ವೆ, ಆಯಿಷ್, ಎಸ್‌ಬಿಐ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿದ ವಿಪಿನ್ ಕುಮಾರ್, ಮನೀಷ್, ರಾಜೀವ್ ಕುಮಾರ್, ಅನುಜ್ ಕುಮಾರ್, ಮಹಾವೀರ್ ಸಿಂಗ್ ಸೇರಿದಂತೆ ವಿವಿಧ ಅಭ್ಯರ್ಥಿಗಳಿಗೆ ಶಾಸಕ ಟಿ.ಎಸ್.ಶ್ರೀವತ್ಸ ಸಾಂಕೇತಿಕವಾಗಿ ನೇಮಕಾತಿ ಪತ್ರ ನೀಡಿದರು.

ದಕ್ಷಿಣ ಕರ್ನಾಟಕ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಹೆಚ್ಚುವರಿ ಡಿಆರ್‌ಎಂ ಶಮ್ಮಾಸ್ ಹಮೀದ್ ಪಾಲ್ಗೊಂಡಿದ್ದರು.