ಜಿಲ್ಲೆ

ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಜನ್ಮದಿನದ ಅಂಗವಾಗಿ ನಗರದ ಜೆ.ಕೆ.  ಮೈದಾನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಮತ್ತು ಆರೋಗ್ಯ ತಪಾಸಣಾ ಶಿಬಿರ ಗುರುವಾರ ಯಶಸ್ವಿಯಾಗಿ ನಡೆಯಿತು.

ಉದ್ಯೋಗ ಮೇಳಕ್ಕೆ ಉದ್ಯೋಗಾಕಾಂಕ್ಷಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಸರ್‌ಖಾಜಿ ಮೌಲಾನ ಉಸ್ಮಾನ್ ಷರೀಫ್, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್‌ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಸೋಮನಾಥ ಸ್ವಾಮೀಜಿ ಮಾತನಾಡಿ, ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಆಯೋಜಿಸಿರುವುದು ಸಂತೋಷದ ಸಂಗತಿ. ಈ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕೆ. ಹರೀಶ್‌ಗೌಡ ಅವರಿಗೆ ದೇವರು ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಕೆ. ಹರೀಶ್‌ಗೌಡ ಅವರು ನಿರಂತರವಾಗಿ ಜನರ ಮಧ್ಯೆ ಇದ್ದಾರೆ. ಅವರು ಎಲ್ಲರೊಡನೆ ಕಿರಿಯರಾಗಿಯೇ ನಡೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ನೂರಾರು ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿವೆ. ಸರ್ವರಿಗೂ ಆರೋಗ್ಯ ನೀಡುವ ದಿಶೆಯಲ್ಲಿ ಆರೋಗ್ಯ ಮೇಳವನ್ನೂ ನಡೆಸಲಾಗಿದೆ ಎಂದು ಹೇಳಿದರು.

ಯುವಕರು ಉದ್ಯೋಗಕ್ಕೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಯಾವುದೇ ಕೆಲಸವಿದ್ದರೂ ಶ್ರದ್ಧೆಯಿಂದ ಮಾಡಬೇಕು. ಆಗ ನಿರೀಕ್ಷೆಗೆ ತಕ್ಕಂತೆ ಕೆಲಸ ಸಿಗುತ್ತದೆ. ಕೆ. ಹರೀಶ್‌ಗೌಡ ಅವರು ಜನನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಶಿಸಿದರು.

ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 52 ಆಸ್ಪತ್ರೆಗಳು ಪಾಲ್ಗೊಂಡಿದ್ದು, ಸುಮಾರು 300ಕ್ಕೂ ಹೆಚ್ಚು ವೈದ್ಯರು ತಪಾಸಣೆ ಮಾಡಿದ್ದಾರೆ. ನಾನು 2008ರಿಂದಲೂ ಉದ್ಯೋಗ ಮೇಳ ನಡೆಸಿಕೊಂಡು ಬಂದಿದ್ದು, ಇಂದು ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಸುಮಾರು 100 ಕಂಪನಿಗಳು ಬಂದಿವೆ. ಪ್ರತಿವರ್ಷ ಮೈಸೂರು ಜಿಲ್ಲೆಯಲ್ಲಿ ಸುಮಾರು 8 ಸಾವಿರ ಜನರು ಪದವಿ ವ್ಯಾಸಂಗ ಪೂರೈಸಿ ತೇರ್ಗಡೆ ಹೊಂದುತ್ತಿದ್ದಾರೆ. ಅಂತಹ ಅನೇಕರಿಗೆ ಇಲ್ಲಿಯೇ ಉದ್ಯೋಗ ದೊರಕಬೇಕು ಎಂಬುದು ನನ್ನ ಉದ್ದೇಶ ಎಂದರು.

ಶಾಸಕರಾದ ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್, ಮಾಜಿ ಮೇಯರ್‌ಗಳಾದ ಮೋದಾಮಣಿ, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಬಿ.ಕೆ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ತಾಪಂ ಮಾಜಿ ಸದಸ್ಯೆ ಮಂಜುಳಾ ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ನಗರ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ರಾಮೇಶ್ ರಾಯಪ್ಪ, ಯೋಗೇಶ್ ಕುಮಾರ್, ಅನಂತ ನಾರಾಯಣ್, ನಾಗೇಶ್ ಇದ್ದರು. ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು ಸ್ವಾಗತಿಸುವುದುರ ಜತೆಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 100ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೂ ಸಾವಿರಾರು ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವೇದಿಕೆಯ ಎಡಭಾಗದಲ್ಲಿದ್ದ ಅಳವಡಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ವಿವಿಧ ಕಂಪನಿಗಳಿಗೆ ಸ್ವವಿವರ ಸಲ್ಲಿಸಿದರು. 100ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ಎಸ್‌ಎಸ್‌ಎಲ್‌ಸಿಯಿಂದ ಪಿಎಚ್.ಡಿ ಅಭ್ಯರ್ಥಿಗಳು ತಮ್ಮ ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಿದರು. ಅಭ್ಯರ್ಥಿಗಳ ಸ್ವವಿವರ ಸ್ವೀಕರಿಸಿದ ಕಂಪನಿಗಳವರು ಕರೆ ಮಾಡುವುದಾಗಿ ತಿಳಿಸಿದರು. ಗುರುವಾರದ ಮಧ್ಯಾಹ್ನದ ವೇಳೆಗೆ 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿರುವುದಾಗಿ ಸಂಘಟಕರು ತಿಳಿಸಿದರು.

3852 ಅಭ್ಯರ್ಥಿಗಳು ಪಾಲ್ಗೊಂಡಿದ್ದು, 2062 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 384 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. 175 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಉಚಿತ ಆರೋಗ್ಯ ಶಿಬಿರ

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ವೇದಿಕೆ ಬಲಭಾಗದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲೂ ಸಾವಿರಾರು ಜನರು ಪಾಲ್ಗೊಂಡರು. ಹೃದ್ರೋಗ, ಕ್ಯಾನ್ಸರ್, ಮೂಳೆ ಸಾಂದ್ರತೆ, ಕಿಡ್ನಿ, ಲಿವರ್ ಸಮಸ್ಯೆಗಳಿಗೆ ಪರೀಕ್ಷಿಸಿಕೊಂಡರು. ಉಚಿತವಾಗಿ ಔಷಧ ವಿತರಣೆ ಮಾಡಲಾಯಿತು. ಶಾಸಕರ ಅಭಿಮಾನಿಗಳು ರಕ್ತದಾನ ಮಾಡಿದರು.

ವಿವಿಧ ಪಕ್ಷಗಳ ರಾಜಕಾರಣಿಗಳು, ಮುಖಂಡರು, ವಿವಿಧ ಮಠಾಧೀಶರು, ಚಾಮರಾಜ ಕ್ಷೇತ್ರದ ಜನತೆ ಪಾಲ್ಗೊಂಡು ಕೆ.ಹರೀಶ್‌ಗೌಡ ಅವರಿಗೆ ಶುಭಾಶಯ ಕೋರಿದರು.

ನನ್ನ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಗಳೊಂದಿಗೆ ಆಚರಿಸುವ ಬಗ್ಗೆ ಸಲಹೆಗೆ ಒಪ್ಪಿದೆ. ಸಾವಿರಾರು ಜನರು ಪಾಲ್ಗೊಂಡಿರುವುದು ಬಹಳ ಖುಷಿ ತಂದಿದೆ. ಕೋವಿಡ್‌ಗೂ ಮೊದಲು ಹುಟ್ಟುಹಬ್ಬದಂದು ಉದ್ಯೋಗ ಮೇಳ ಆಯೋಜಿಸುತ್ತಿದೆ. ಮುಂಬರುವ ವರ್ಷಗಳಲ್ಲೂ ಉದ್ಯೋಗ ಮೇಳ ಆಯೋಜಿಸುವೆ. ಎಲ್ಲರ ಪ್ರೀತಿಗೆ ಅಭಾರಿಯಾಗಿರುವೆ. ಕೆ.ಹರೀಶ್‌ಗೌಡ, ಶಾಸಕ