ಕಾರವಾರ: ಉದ್ಯೋಗ ಭದ್ರತೆ, ಕೋವಿಡ್ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ನೌಕರರು ಶುಕ್ರವಾರದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಆರಂಭಿಸಿದ್ದಾರೆ.
ಈಗಾಗಲೇ ಒಂದು ವಾರದಿಂದ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದ ನೌಕರರು ಇನ್ನೂ ಒಂದು ವಾರಗಳ ಕಾಲ ಡಿಸಿ ಕಚೇರಿ ಹಾಗೂ ವಿವಿಧ ತಹಸೀಲ್ದಾರ್ ಕಚೇರಿಗಳ ಎದುರು ಪ್ರತಿ ದಿನ 2 ತಾಸು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ನೀಡಿ ಎಂಬ ಫಲಕವನ್ನು ಬೆನ್ನಿಗೆ ಹಚ್ಚಿಕೊಂಡ ನೌಕರರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಸುಹಾಸ, ಕೋವಿಡ್ ಸಮಯದಲ್ಲಿ ಜೀವದ ಭಯ ಬಿಟ್ಟು ಗುತ್ತಿಗೆ ನೌಕರರು ಕೆಲಸ ಮಾಡಿದ್ದೇವೆ. ಇದುವರೆಗೆ ರಾಜ್ಯದಲ್ಲಿ 17 ನೌಕರರು ಮೃತಪಟ್ಟಿದ್ದಾರೆ. ಆದರೆ, ಅವರನ್ನು ಸರ್ಕಾರ ಪ್ರಾಣಿಗಳಂತೆ ನೋಡುತ್ತಿದೆ. ಸರ್ಕಾರಿ ನೌಕರರು ಮೃತಪಟ್ಟರೆ ಅವರ ಕುಟುಂಬದವರಿಗೆ ಉದ್ಯೋಗ ಸಿಗುತ್ತದೆ. ಇನ್ಶುರೆನ್ಸ್ ಸೇರಿ ವಿವಿಧ ಪರಿಹಾರವನ್ನು ಸರ್ಕಾರ ನೀಡುತ್ತದೆ. ಆದರೆ, ಗುತ್ತಿಗೆ ನೌಕರರಿಗೆ ಯಾವುದೇ ಸೌಕರ್ಯವಿಲ್ಲ. ಹತ್ತಿಪ್ಪತ್ತು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಪ್ರತಿ ಜನವರಿ ಬಂದಾಗ ಎಲ್ಲಿ ನಾವು ಕೆಲಸ ಕಳೆದುಕೊಳ್ಳುತ್ತೀವೋ ಎಂಬ ಭಯ ಮೂಡುತ್ತದೆ. ಸರ್ಕಾರಿ ನೌಕರರಂತೆಯೇ ಕೆಲಸ ಮಾಡಿದರೂ ನಮಗೆ ವೇತನ ಮಾತ್ರ ಅತಿ ಕಡಿಮೆ ಸಿಗುತ್ತದೆ. ಇವುಗಳನ್ನು ಬಗೆಹರಿಸುವಂತೆ ಕಳೆದ ಜೂನ್ನಲ್ಲಿ ಸರ್ಕಾರಕ್ಕೆ ಮನವಿ ಮಾಡಿದಾಗ ಸರ್ಕಾರ 3 ತಿಂಗಳ ಕಾಲಾವಕಾಶ ಕೋರಿತ್ತು. ಮೂರು ತಿಂಗಳ ನಂತರವೂ ಯಾವುದೇ ಸ್ಪಂದನೆ ಇಲ್ಲದ ಕಾರಣ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದೇವೆ. ಸರ್ಕಾರ ಸ್ಪಂದಿಸದೇ ಇದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಕೋವಿಡ್ ಇನ್ಶುರೆನ್ಸ್ ಕೊಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಉದ್ಯೋಗ ಭದ್ರತೆ ಸೇರಿ 14 ಬೇಡಿಕೆಗಳನ್ನಿಟ್ಟು ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ಅಡಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು. ಸಂಘಟನೆಯ ಯು.ಆರ್. ಚೌಡರ್, ಬಿಎಂಎಸ್ನ ದುಂಡಪ್ಪ ಬಂಡಿವಡ್ಡರ್ ಇದ್ದರು.