ಜಿಲ್ಲೆ

ಉದ್ಯಾನಕ್ಕೆ ಶಾಸಕರ ಅನಿರೀಕ್ಷಿತ ಭೇಟಿ

ಬೀದರ್: ನಗರದ ವಿವಿಧ ಉದ್ಯಾನವನಗಳಿಗೆ ಶಾಸಕ ರಹೀಮ್ ಖಾನ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದರು.

ನಗರದ ಶಹಾಪುರ ಗೇಟ್ ಹತ್ತಿರದಲ್ಲಿನ ಹಳ್ಳದಕೇರಿ ಟ್ರೀ ಪಾಕ್೯ ಭೇಟಿ ನೀಡಿ ಸುತ್ತಾಡಿ ವೀಕ್ಷಣೆ ನಡೆಸಿದರು. ಔಷಧ ಸಸಿಗಳ ಉಪಯೋಗದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಾಕ್೯ನಲ್ಲಿ ಕುಡಿಯುವ ನೀರಿನ ಸೌಕರ್ಯ ಕುರಿತು ಮಾಹಿತಿ ಪಡೆದರು. ಇಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ತಿಳಿಸಿದರು.

ಸುಮಾರು 25 ಎಕರೆ ಪ್ರದೇಶದಲ್ಲಿ ಟ್ರೀ ಪಾಕ್೯ ಇದ್ದು, ಇಲ್ಲಿ ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಮಾಡಬಹುದು. ಚಿಕ್ಕ ಮಕ್ಕಳಿಗೆ ಆಟವಾಡಲು ಅನುಕೂಲವಿದೆ. ಹೀಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ನಂತರ ದೇವ ದೇವ ವನಕ್ಕೆ ಭೇಟಿ ನೀಡಿದರು. ಗಾರ್ಡನ್ ಮೊದಲಿಗಿಂತಲೂ ಪ್ರಗತಿಯಾಗಿದೆ. ಅತ್ಯುತ್ತಮ ಪರಿಸರ ಇಲ್ಲಿದೆ. ಇಲ್ಲಿಗೆ ಸಹ ಸಾರ್ವಜನಿಕರು ಭೇಟಿ ಕೊಡಬೇಕು ಎಂದು ತಿಳಿಸಿದರು.

ಶಹಾಪುರ ಗೇಟ್ ಹತ್ತಿರದ ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗಾಗಿ ಶ್ರೀಗಂಧ, ಹೆಬ್ಬೆವು, ಕರಿಬೇವು ಮತ್ತು ಲಿಂಬೆ ಇತರೆ ಜಾತಿಯ ಗಿಡ ಬೆಳೆಸಲಾಗಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ ಅವರು ಶಾಸಕರಿಗೆ ಮಾಹಿತಿ ನೀಡಿದರು. ಇಲ್ಲಿನ ನರ್ಸರಿಯಿಂದ ಸಾರ್ವಜನಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಹಾಗೂ ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಇರುವ ಸೌಕರ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.

ಬೀದರ್ ನಗರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಸಸಿ ನೆಡಬೇಕು. ಜನರಿಗೆ ನೆರಳು ಆಗುವಂತಹ ಹೂ, ಹಣ್ಣಿನ ಗಿಡ ನೆಡಲು ಒತ್ತು ಕೊಡಬೇಕು. ಪರಿಸರ ಉಳಿದರೆ ನಾವು ಎಂಬುದು ಅರಿಯಬೇಕು.| ರಹೀಮ್ ಖಾನ್, ಶಾಸಕ